ಬಂಟ್ವಾಳ, ಆ. 02 (DaijiworldNews/AA): ಅಕ್ರಮ ಮರಳು ಅಡ್ಡೆಗೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಬಂಟ್ವಾಳ, ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ಆಗಸ್ಟ್ 1ರಂದು ನಡೆದಿದೆ.


ಆರೋಪಿ ಅಬ್ದುಲ್ ಸಮದ್ ಎಂಬಾತನು ಹೊಳೆಯಿಂದ ಯಂತ್ರದ ಮೂಲಕ ಮರಳನ್ನು ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಹೊರೆತಿದೆ. ಈ ಹಿನ್ನೆಲೆ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರತ್ನಕುಮಾರ್ ರವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದ್ದಾರೆ.
ಈ ವೇಳೆ ಕೇರಳ ಗಡಿಭಾಗದಿಂದ ಅಂದಾಜು ಒಂದು ಕಿ.ಮೀ ದೂರದ ಸಾಲೆತ್ತೂರು ಕಟ್ಟತ್ತಿಲ ಹೊಳೆಯ ಸೇತುವೆ ಬಳಿ, ಸುಮಾರು 2 ರಿಂದ 3 ಪಿಕಪ್ ನಷ್ಟು ಮರಳು ಮತ್ತು ಹೊಳೆಯಿಂದ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಯಂತ್ರ, ಕಬ್ಬಿಣದ ಜಾಲರಿ, ಪೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಹಾಗೂ ಕೃತ್ಯಕ್ಕೆ ಬಳಸಿದ ಇತರೆ ಸೊತ್ತುಗಳು ಕಂಡುಬಂದಿದೆ. ಈ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ:93/2025 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.