ಕುಂದಾಪುರ, ಆ. 02 (DaijiworldNews/AA): ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ಹಿರಿಯ ನಾಗರಿಕರಿಗೆ ಆಶ್ರಮ ರೂಪಿಸಲು ಸಿದ್ಧತೆ ನಡೆಸಿದ್ದು ಆ.7ರಂದು ಬೆಳಗ್ಗೆ 10.30ಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಸಭಾಪತಿ ಎಸ್. ಜಯಕರ ಶೆಟ್ಟಿ ಹೇಳಿದರು.


ಸಂಸ್ಥೆಯ ವಠಾರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ವಾಡಿ ಗ್ರಾಮದ ಹೂವಿನಕೆರೆ ರಸ್ತೆಯಲ್ಲಿ 1.25 ಎಕರೆ ಜಾಗ ಖರೀದಿಸಲಾಗಿದೆ. ಕಟ್ಟಡವು ಸುಮಾರು 20 ಸಾವಿರ ಚದರದಡಿಯಷ್ಟಿದ್ದು 28 ಸುಸಜ್ಜಿತ ಕೋಣೆಗಳಿರುತ್ತದೆ. ಊಟದ ಹಾಲ್, ವೈದ್ಯರ ತಪಾಸಣೆ ಕೊಠಡಿ, ವಾಚಾನಲಯ, ಯೋಗ ಕೊಠಡಿ ವ್ಯವಸ್ಥೆ ಗಾರ್ಡನ್ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.
ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ರಾಜ್ಯ ಉಪಾಧ್ಯಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಶಂಕು ಸ್ಥಾಪನೆ ನೆರವೇರಿಸುತ್ತಾರೆ. ಕಾರ್ಯಕ್ರಮಕ್ಕೆ ಉಡುಪಿ ಡಿಸಿ ಸ್ವರೂಪ ಟಿ.ಕೆ., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಾಜ್ಯಾಧ್ಯಕ್ಷ ಬನ್ನೂರು ರಾಜೀವ ಶೆಟ್ಟಿ, ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಉಪಾಧ್ಯಕ್ಷ ಡಾ. ಶ್ರೀನಿವಾಸ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.