ಮಂಗಳೂರು, , ಆ. 02 (DaijiworldNews/AK): ಚಲಿಸುತ್ತಿದ್ದ ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಬಸ್ ನಿರ್ವಾಹಕನನ್ನು ಚಾಲಕ ತಕ್ಷಣ ನೇರವಾಗಿ ಸಮೀಪದ ಆಸ್ಪತ್ರೆಗೆ ಚಲಾಯಿಸಿ ಕ್ಲಪ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ ಘಟನೆ ತೊಕ್ಕೊಟ್ಟು ಸಮೀಪದ ದೇರಳಕಟ್ಟೆ ನಾಟೆಕಲ್ ನಲ್ಲಿ ನಡೆದಿದೆ.


ಸದ್ಯ ಜೀವ ಉಳಿಸಿದ ಬಸ್ ಚಾಲಕನನ್ನು ಕಣಚೂರು ಆಸ್ಪತ್ರೆಯ ಚೇರ್ ಮೆನ್ ಸೂಚನೆ ಮೇರೆಗೆ ಸಿಬ್ಬಂದಿ ಸನ್ಮಾನಿಸಿದ್ದಾರೆ. ಶುಕ್ರವಾರ ಬೆಳಗ್ಗೆ 8.00 ಗಂಟೆ ಮುಡಿಪುವಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಿರ್ವಾಹಕ ಸಂಜೀವ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಕಂಬಳಪದವು ತಲುಪುತ್ತಿದ್ದಂತೆಯೇ ತಲೆ ಸುತ್ತಿದ ಹಾಗಾಗಿದ್ದು, ಜನರು ನೋಡುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಅದೇ ಬಸ್ಸಿನ ಚಾಲಕ ಅವೀಶ್ ಮದರನ್ ಅವರು ಬಸ್ ನ್ನು ಕಂಬಳ ಪದವಿನಿಂದ ದೇರಳಕಟ್ಟೆ ಕಣಚೂರು ಆಸ್ಪತ್ರೆ ತನಕ ಜೀರೋ ಟ್ರಾಫಿಕ್ ಸಿಗ್ನಲ್ ನಲ್ಲಿ ಬಂದಂತೆ ಎಲ್ಲೂ ಕೂಡ ನಿಲುಗಡೆ ಕೊಡದೆ ಆಸ್ಪತ್ರೆಯ ಎಮರ್ಜೆನ್ಸಿ ದ್ವಾರದ ಬಳಿಗೆ ತಂದು ನಿಲ್ಲಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಮಯ ಪ್ರಜ್ಞೆ ಮೆರೆದ ಕಾರಣ ಜೀವನ್ಮರಣ ಹೋರಾಟದಲ್ಲಿದ್ದ ಬಸ್ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಇನ್ನು ಸಮಯ ಪ್ರಜ್ಞೆ ತೋರಿದ ಚಾಲಕನಿಗೆ ಆಸ್ಪತ್ರೆಯ ಚೇರ್ ಮೆನ್ ಡಾ. ಯುಕೆ. ಮೋನು ಕಣಚೂರು ಅವರ ಸೂಚನೆಯ ಮೇರೆಗೆ ಆಸ್ಪತ್ರೆಯ ಪ್ರಮುಖರಾದ ಡಾ. ಇಸ್ಮಾಯಿಲ್ ಹೆಜಮಾಡಿ, ಡಾ. ವೆಂಕಟ್ ರಾಯ ಪ್ರಭು, ಅಶ್ರಫ್ ಚೆಂಬುಗುಡ್ಡೆ, ಅಸ್ಗರ್ ಸಮ್ಮುಖದಲ್ಲಿ ಸನ್ಮಾನಿಸಲಾಗಿದೆ.