ಬೆಳ್ತಂಗಡಿ, ಆ. 02 (DaijiworldNews/AK):ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸಾಮೂಹಿಕ ಮೃತದೇಹಗಳನ್ನು ಹೂತು ಹಾಕಿರುವ ಘಟನೆಗೆ ತನಿಖೆಯಲ್ಲಿ ಸ್ಫೋಟಕ ತಿರುವು ಸಿಕ್ಕಿದ್ದು,ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾದ ಜಯಂತ್ ಟಿ ಅವರು ತಾನು ನೋಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.

ಸ್ಥಳೀಯ ನಿವಾಸಿ ಜಯಂತ್ ಟಿ. ಎಂಬವರು ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ಹಾಜರಾಗಿ, ದಶಕದ ಹಿಂದೆ ನಡೆದ ಅನುಮಾನಾಸ್ಪದ ಅಂತ್ಯಕ್ರಿಯೆಯ ನೇರ ಮಾಹಿತಿಯ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳನ್ನು ಭೇಟಿಯಾದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಯಂತ್, ಸುಮಾರು 15 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಯುವತಿಯ ಶವವನ್ನು ತಾವು ಖುದ್ದಾಗಿ ನೋಡಿದ್ದಾಗಿ ಬಹಿರಂಗಪಡಿಸಿದರು. ಯಾವುದೇ ಕಾನೂನು ಪ್ರಕ್ರಿಯೆ, ಪೊಲೀಸ್ ಹಸ್ತಕ್ಷೇಪ ಅಥವಾ ಮರಣೋತ್ತರ ಪರೀಕ್ಷೆ ಇಲ್ಲದೆ ಆ ಶವವನ್ನು ಹೂಳಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
"ನಾನು ಹುಡುಗಿಯ ಶವವನ್ನು ನಾನೇ ನೋಡಿದೆ. ಅದನ್ನು ಆಸ್ಪತ್ರೆಗೆ ಕೊಂಡೊಯ್ಯಲಿಲ್ಲ, ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ, ಮತ್ತು ಮರಣೋತ್ತರ ಪರೀಕ್ಷೆಯನ್ನೂ ಮಾಡಲಾಗಿಲ್ಲ. ಶವವನ್ನು ಸದ್ದಿಲ್ಲದೆ ಸಮಾಧಿ ಮಾಡಲಾಯಿತು, ಮತ್ತು ಇದನ್ನು ದೃಢೀಕರಿಸುವ ವಿಶ್ವಾಸಾರ್ಹ ಮಾಹಿತಿ ನನ್ನಲ್ಲಿದೆ. ಅದನ್ನೇ ನಾನು ಎಸ್ಐಟಿಗೆ ವರದಿ ಮಾಡಿದ್ದೇನೆ" ಎಂದು ಅವರು ಹೇಳಿದರು.
ಈ ಘಟನೆಯು ವರ್ಷಗಳಿಂದ ತಮ್ಮನ್ನು ಕಾಡುತ್ತಿತ್ತು ಮತ್ತು ಈ ಹಿಂದೆ ಹಲವಾರು ವೇದಿಕೆಗಳಲ್ಲಿ ಇದರ ಬಗ್ಗೆ ಮಾತನಾಡಿದ್ದೆ ಎಂದು ಜಯಂತ್ ಹೇಳಿದರು. ಆದಾಗ್ಯೂ, ರಾಜ್ಯ ಸರ್ಕಾರವು ಎಸ್ಐಟಿ ರಚಿಸಿ ಪ್ರಕರಣದ ಬಗ್ಗೆ ಸಾರ್ವಜನಿಕ ಗಮನ ಸೆಳೆದ ನಂತರ, ಎಸ್.ಐ.ಟಿ ತಂಡದ ಮೇಲೆ ವಿಶ್ವಾಸವಿರಿಸಿ ದೂರು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.