ಕಾಸರಗೋಡು ಡಿ 07 : ಖಾಸಗಿ ಬಸ್ಸುಗಳ ಮೇಲೆ ಎರಡನೇ ದಿನವೂ ಕಲ್ಲೆಸೆತದ ಘಟನೆಗಳು ನಡೆದಿದ್ದು , ಬುಧವಾರ ರಾತ್ರಿಯ ಬಳಿಕ ಐದಕ್ಕೂ ಅಧಿಕ ಖಾಸಗಿ ಬಸ್ಸುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೃತ್ಯವನ್ನು ಖಂಡಿಸಿ ಕಾಸರಗೋಡು - ತಲಪಾಡಿ , ಕುಂಬಳೆ - ಮುಳ್ಳೇರಿಯ ರಸ್ತೆಯಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು . ಪೆರ್ಮುದೆ - ಬಂದ್ಯೋಡು ಹಾಗೂ ಇನ್ನಿತರ ಕೆಲ ರೂಟ್ ಗಳಲ್ಲಿ ಬಸ್ಸು ಸಂಚಾರ ವಿರಳವಾಗಿತ್ತು .
ಮಂಜೇಶ್ವರ ಹೊಸಬೆಟ್ಟು ಎಂಬಲ್ಲಿ ಖಾಸಗಿ ಬಸ್ಸಿನ ಮೇಲೆ ಕಲ್ಲೆಸೆಯಲಾಗಿದ್ದು , ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆ ಮುಳ್ಳೇರಿಯಾ , ಕುಂಬಳೆ - ಬೆಳಿಂಜ ನಡುವೆ ಸಂಚರಿಸುವ ಬಸ್ಸಿನ ಮೇಲೂ ಬುಧವಾರ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿದ್ದು , ಬಸ್ಸಿನ ಗಾಜುಗಳು ಹುಡಿಯಾಗಿವೆ.
ಈ ನಡುವೆ ಡಿ 7 ರ ಗುರುವಾರ ಬೆಳಿಗ್ಗೆ ಕಾಸರಗೋಡು ನಗರ ಹೊರವಲಯದ ಎರಿಯಾಲ್ ನಲ್ಲಿ ಕಾಸರಗೋಡಿನಿಂದ ಕುಂಬಳೆಗೆ ಬರುತ್ತಿದ್ದ ಖಾಸಗಿ ಬಸ್ಸಿನ ಮೇಲೆ ಕಲ್ಲೆಸೆಯಲಾಗಿದ್ದು , ಚಾಲಕ ಕುಂಬಳೆ ಕಳತ್ತೂರಿನ ರುಕೇಶ್ ಗಾಯಗೊಂಡಿದ್ದಾರೆ. ಮುಂಭಾಗದ ಗಾಜು ಹುಡಿಯಾಗಿದ್ದು ಚಾಲಕ ಸ್ವಲ್ಪದರಲ್ಲೇ ಬಾರಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಬಳಿಕ ಕಾರ್ಯಾಚರಣೆ ನಡೆಸಿದ ಕಾಸರಗೋಡು ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕೂಡ್ಲು ವಿನ ಇಂಜಮಾಮ್ ( ೨೫) , ಮುಹಮ್ಮದ್ ಅಜ್ಮಲ್ ( 19) ಎಂದು ಗುರುತಿಸಲಾಗಿದೆ.. ಇನ್ನಿಬ್ಬರು ಅಪ್ರಾಪ್ತ ಬಾಲಕರಾಗಿದ್ದರೆ .
ಬಸ್ಸು ಗಳ ಮೇಲಿನ ನಿರಂತರ ದಾಳಿ ಪ್ರತಿಭಟಿಸಿ ಖಾಸಗಿ ಬಸ್ಸುಗಳು ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಿಂಚಿನ ಮುಷ್ಕರ ನಡೆಸಿದ್ದು , ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪರದಾಡು ವಂತಾಯಿತು. ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸುವಂತಾಯಿತು
ಕಳೆದ ಎರಡು ದಿನಗಳ ಅವಧಿಯಲ್ಲಿ ಹತ್ತಕ್ಕೂ ಅಧಿಕ ಬಸ್ಸು , 15 ಕ್ಕೂ ಅಧಿಕ ಇತರ ವಾಹನಗಳ ಮೇಲೆ ಕಲ್ಲೆಸೆಯಲಾಗಿದೆ. ಕುಂಬಳೆ , ಮಂಜೇಶ್ವರ , ಕಾಸರಗೋಡು , ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಕರಣಗಳು ನಡೆದಿವೆ.