ಉಳ್ಳಾಲ, ಆ. 05 (DaijiworldNews/TA): ಒಂದು ಕಾಲದಲ್ಲಿ ಕೇವಲ ವೈಜ್ಞಾನಿಕ ಕಲ್ಪನೆಯಾಗಿ ಇರುತ್ತಿದ್ದ ವಿಷಯಗಳು ಇವತ್ತು ವೈದ್ಯಕೀಯ ಚಿಕಿತ್ಸೆಯ ಭಾಗವಾಗಿವೆ. ವೈಯಕ್ತಿಕ ಚಿಕಿತ್ಸೆಯಿಂದ ಹಿಡಿದು ಗರ್ಭಪೂರ್ವ ಜನಕೀಯ ಪರೀಕ್ಷೆಗಳವರೆಗೆ, ವೈದ್ಯಲೋಕ ಅಪೂರ್ವ ಸಾಧ್ಯತೆಗಳ ಯುಗದಲ್ಲಿ ಕಾಲಿಟ್ಟಿದ್ದೇವೆ." ಗರ್ಭಾಧಾನ ಚಿಕಿತ್ಸೆಯಲ್ಲಿ ಸ್ಟೆಮ್ ಸೆಲ್ ಬಳಕೆ, ಜನಕೀಯ ಪರೀಕ್ಷೆಗಳ ನೈತಿಕ ಅಂಶಗಳು ಮತ್ತು ನೂತನ ತಂತ್ರಜ್ಞಾನಗಳನ್ನೆಲ್ಲಾ ದಿನನಿತ್ಯದ ವೈದ್ಯಕೀಯ ಕಾರ್ಯಗಳಲ್ಲಿ ಸೇರಿಸಿಕೊಂಡಿದೆ. ಈ ರೀತಿಯ ಶೈಕ್ಷಣಿಕ ವೇದಿಕೆಗಳು ಹೊಸತನ, ಸಹಕಾರ ಮತ್ತು ನಿರಂತರ ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸಲು ಬಹುಮುಖ್ಯವಾಗಿದೆ ಎಂದು ಕಣಚೂರು ವೈದ್ಯ ವಿಜ್ಞಾನ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯ ಡಾ|.ಎಂ.ಇಸ್ಮಾಯಿಲ್ ಹೆಜಮಾಡಿ ಹೇಳಿದರು.

ಅವರು ನಾಟೆಕಲ್ ಕಣಚೂರು ವೈದ್ಯ ವಿಜ್ಞಾನ ಸಂಸ್ಥೆ (ಕಿಮ್ಸ್)ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಆಸ್ಪತ್ರೆಯ ಕಾನ್ಫರೆನ್ಸ್ ಡೋಮ್ ನಲ್ಲಿ ಹಮ್ಮಿಕೊಂಡಿದ್ದ 'ಭವಿಷ್ಯದ ದೃಷ್ಟಿ: ಜನನಶಾಸ್ತ್ರ ಮತ್ತು ಪುನರುತ್ಪಾದಕ ಚಿಕಿತ್ಸೆಗಳಿಗೆ ಹೊಸ ರೂಪು' ವಿಚಾರದ ಕುರಿತಾಗಿ ಒಂದು ದಿನದ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಣಚೂರು ವೈದ್ಯ ವಿಜ್ಞಾನ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯ ಹಾಗೂ ವೈದ್ಯಕೀಯ ಕಾಲೇಜು ಡೀನ್ ಡಾ.ಶಾನವಾಝ್ ಮಾಣಿಪ್ಪಾಡಿ, ಸಂಘಟಕರುಗಳಾದ ಡಾ.ಸೋನಿಯಾ ಮಂಡಪ್ಪ ಮುಖ್ಯ ಅತಿಥಿಗಳಾಗಿದ್ದರು. ಡಾ| ದೀಪಾ ಭಟ್ ಇವರು ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆಯಲ್ಲಿ ಜನಕೀಯ ವಿಜ್ಞಾನದ ಮೂಲಭೂತ ಅರಿವು ಕುರಿತು , ಪ್ರೀ ಇಂಪ್ಲಾಂಟೇಷನ್ ಜನಕೀಯ ನಿರ್ಧಾರ – ಹೊಸ ತಂತ್ರಜ್ಞಾನಗಳು ಮತ್ತು ಮುಂದುವರೆದ ವಿಚಾರಗಳ ಕುರಿತು, ಡಾ. ಫಿಯೋನಾ ಡಿಸೋಜ, ಸ್ತ್ರೀರೋಗ ಚಿಕಿತ್ಸೆಯಲ್ಲಿ ಪುನರುತ್ಪಾದಕ ಚಿಕಿತ್ಸೆ ಕುರಿತಾಗಿ ಡಾ. ಯೋಗಿತಾ ರಾವ್ ಮುದ್ರಾಡಿ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಮಾರೋಪದಲ್ಲಿ ಇ-ಪೋಸ್ಟರ್ ಸ್ಪರ್ಧೆ ಮತ್ತು ಪ್ರಶ್ನೋತ್ತರ ಸ್ಪರ್ಧೆಯ ವಿಜೇತರಿಗೆ ಸನ್ಮಾನಿಸಲಾಯಿತು. ಡಾ.ರೇಖಲತಾ ಸ್ವಾಗತಿಸಿದರು. ಡಾ.ಜಮೀಲಾ ವಂದಿಸಿದರು.