ಬೆಳ್ತಂಗಡಿ, ಆ. 06 (DaijiworldNews/AK): ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಅಂತಿಮ ಘಟ್ಟಕ್ಕೆ ಬಂದು ತಲುಪಿದಂತಿದೆ. ಇಂದು ಪಾಯಿಂಟ್ ನಂಬರ್ 13 ಅಂದ್ರೆ ಮುಸುಕುಧಾರಿ ತೋರಿಸಿದ ಕೊನೆಯ ಪಾಯಿಂಟ್ನಲ್ಲಿ ಶವದ ಶೋಧ ಕಾರ್ಯ ನಡೆಯಲಿದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆ ಬಹಳ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಅನಾಮಿಕ ದೂರುದಾರ ಗುರುತಿಸಿದ 13ರ ಪೈಕಿ 12 ಪಾಯಿಂಟ್ಗಳಲ್ಲಿ ಶೋಧ ಕಾರ್ಯ ನಡೆದಿದೆ. 12 ಪಾಯಿಂಟ್ನಲ್ಲೂ ಏನೂ ಸಿಗದಿದ್ದು, ಇನ್ನು ಉಳಿದಿರುವುದು ಒಂದೇ ಒಂದು ಪಾಯಿಂಟ್.
ಈವರೆಗೆ ಶೋಧ ಕಾರ್ಯ ನಡೆಸಿದ 12 ಪಾಯಿಂಟ್ಗಳಲ್ಲಿ ಒಂದು ಕಡೆ ಮಾತ್ರ ಮೃತದೇಹದ ಕಳೇಬರ ಸಿಕ್ಕಿದೆ. ಮತ್ತೊಂದು ಕಡೆ ಕಾಡಿನಲ್ಲಿ ಪರಿಶೀಲನೆ ನಡೆಸುವಾಗ ಎರಡು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾದ ಶವಗಳ ಮೂಳೆಗಳು ದೊರೆತಿದೆ. ಇದು ದೂರುದಾರ ಹೂತಿದ್ದಲ್ಲ, ಅಸಹಜ ಸಾವಿನ ಪ್ರಕರಣ ಎಂದು ಹೇಳಲಾಗುತ್ತಿದೆ.
ಈ ನಡುವೆ ಮಂಗಳವಾರ ನಡೆದ ಎರಡು ಸಮಾಧಿಯ ಶೋಧ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಸಮಾಧಿಗಳ ಶೋಧ ಪ್ರಕ್ರಿಯೆಯಲ್ಲಿ ಎಲ್ಲರ ಗಮನವಿರುವುದು ಪಾಯಿಂಟ್ ನಂಬರ್ 13ರ ಮೇಲೆ. ದೂರುದಾರ ಅಲ್ಲಿ ಹತ್ತಕ್ಕೂ ಹೆಚ್ಚು ಶವ ಹೂತಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದ. ದೂರುದಾರ ಹಾಗೂ ವಕೀಲರ ಪರ ಕಳೆದ ಆರು ದಿನಗಳಿಂದ ಯಾವುದೇ ನಿರೀಕ್ಷಿತ ಬೆಳವಣಿಗೆ ನಡೆದಿಲ್ಲ. ದೂರು ಕೊಟ್ಟಾಗ ಇದ್ದ ನಿರೀಕ್ಷೆಗಳೆಲ್ಲ ಇದೀಗ ಹುಸಿಯಾಗಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಎಂದಿನಂತೆ ಅಧಿಕಾರಿಗಳು, ಎಸ್ಐಟಿ ಮತ್ತು ದೂರುದಾರನನ್ನೊಳಗೊಂಡ ದಂಡು ನೇತ್ರಾವತಿ ತಟದತ್ತ ಬರಲಿದೆ. ಎಸ್ಐಟಿ ತನಿಖೆಯ ಬಿಗ್ ಡೇ ಇಂದೇ ಆಗಿದ್ದು, ದೂರಿಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಗಳು ಲಭ್ಯವಾಗುತ್ತಾ ಎಂಬ ಕುತೂಹಲವಿದೆ.