ಮಂಗಳೂರು, ಜೂ26(Daijiworld News/SS): ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಕಳ್ಳತನ, ಅಕ್ರಮ ಗೋಸಾಗಾಟ ಹೆಚ್ಚುತ್ತಿದ್ದು ಗೋಕಳ್ಳರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಸಕ ಹರೀಶ್ ಪೂಂಜಾ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀಮತಿ ನೀಲಮಣಿ ಎನ್ ರಾಜು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇಯಲು ಬಿಟ್ಟ ಗೋವುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೆ ಗೋಕಳ್ಳರು ಈಗ ಬಡ ರೈತರ ಕೊಟ್ಟಿಗೆಗೆ ನುಗ್ಗಿ, ತಲವಾರು ಬೀಸಿ ಗೋವುಗಳನ್ನು ಅಪಹರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಗೋಕಳ್ಳತನವನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗುತ್ತಿದೆ. ಅಲ್ಲದೆ ನಾಲ್ಕು ದಿನದ ಹಿಂದೆ ಗೋಕಳ್ಳರನ್ನು ಹಿಡಿದ ಪೊಲೀಸರ ಮುಂದೆ ಪಟಾಕಿ ಸಿಡಿಸಿ ಗೋವುಗಳನ್ನು ಸಾಗಿಸಿ ಪೊಲೀಸರಿಗೆ ಸವಾಲೆಸೆದ ಘಟನೆಯು ನಡೆದಿದೆ. ಈ ರೀತಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಸಾಧ್ಯತೆ ಇದೆ. ಈ ಕುರಿತಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀಮತಿ ನೀಲಮಣಿ ಎನ್ ರಾಜು ಅವರನ್ನು ಭೇಟಿಯಾಗಿ ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.