ಕಾಸರಗೋಡು, ಆ. 07 (DaijiworldNews/TA): ಮನೆಯಂಗಳದ ಗೂಡಿನಲ್ಲಿದ್ದ ನಾಯಿಯನ್ನು ಚಿರತೆಯು ಹೊತ್ತೊಯ್ದ ಘಟನೆ ಕಾಸರಗೋಡು ಮುಳಿಯಾರು ಸಮೀಪದ ಓಲಂಜುಕಯ ಎಂಬಲ್ಲಿ ನಡೆದಿದೆ. ಗೋಪಾಲನ್ ನಾಯರ್ ಎಂಬವರ ಜರ್ಮನ್ ಶೆಫರ್ಡ್ ಸಾಕು ನಾಯಿಯನ್ನು ಗೂಡು ಮುರಿದು ಚಿರತೆ ಕೊಂಡೊಯ್ದಿದೆ. ಇದರಿಂದ ಕೆಲ ತಿಂಗಳ ಬಳಿಕ ಮುಳಿಯಾರು ಜನತೆ ಚಿರತೆಯ ಭಯದಿಂದ ಬದುಕುವಂತಾಗಿದೆ.

ಕಾರಡ್ಕ ರಕ್ಷಿ ತಾರಣ್ಯ ವ್ಯಾಪ್ತಿಯಲ್ಲಿ ಗೋಪಾಲನ್ ನಾಯರ್ ಅವರ ಮನೆ ಇದ್ದು, ಈ ಹಿಂದೆಯೂ ಪ್ರದೇಶದಲ್ಲಿ ಚಿರತೆ ಕಂಡುಬಂದಿತ್ತು. ಮುಂಜಾನೆ ದಾಳಿ ನಡೆಸಿದ್ದು , ಕಬ್ಬಿಣದಿಂದ ತಯಾರಿಸಲಾದ ಗಟ್ಟಿಮುಟ್ಟಾದ ಈ ಗೂಡನ್ನು ಮುರಿದಿರುವ ಚಿರತೆ ನಾಯಿಯನ್ನು ಕೊಂಡೊಯ್ದಿದೆ. ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.
ಮನೆ ಅಂಗಳ ಹಾಗೂ ಜಗಲಿಯಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಮನೆಯಂಗಳದ ತೋಟದ ಮೂಲಕ ನಾಯಿಯನ್ನು ಕೊಂಡೊಯ್ದಿರುವ ಕುರುಹುಗಳು ಪತ್ತೆಯಾಗಿವೆ. ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸರದಲ್ಲಿ ಕ್ಯಾಮರಾ ಹಾಗೂ ಚಿರತೆಗೆ ಬೋನು ಇರಿಸುವುದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.