ಮಂಗಳೂರು, ಆ. 07 (DaijiworldNews/TA): ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮಂಗಳೂರಿನ ಮುಡಿಗೆ ಇದೀಗ ಮತ್ತೊಂದು ಗರಿ ಬಿದ್ದಿದೆ. ಜಗತ್ತಿನಲ್ಲೇ ಸುರಕ್ಷಿತ ನಗರಗಳ ಪೈಕಿ ದೇಶದಲ್ಲಿ ಮಂಗಳೂರು ನಗರ ಮೊದಲನೇ ಸ್ಥಾನ ಮತ್ತು ವಿಶ್ವದಲ್ಲಿ 49 ನೇ ಸ್ಥಾನ ಪಡೆದಿದೆ.

ಸ್ವತಂತ್ರ ಬಳಕೆದಾರರ ಜಾಗತಿಕ ಡಾಟಾಬೇಸ್ ಆಗಿರುವ "ನಂಬಿಯೋ' ತನ್ನ 2025ರ ವರ್ಷದ ಮಧ್ಯ ಭಾಗದ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಮಂಗಳೂರು ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ. ಸುರಕ್ಷಿತ ನಗರಗಳ ವಿಭಾಗದಲ್ಲಿ ವಿಶ್ವದ ಒಟ್ಟು 393 ನಗರದ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಭಾರತದ 23 ನಗರ ಈ ಪಟ್ಟಿಯಲ್ಲಿದೆ.
ಇದರಲ್ಲಿ ಮಂಗಳೂರು ನಗರ ಶೇ.74.2 ಅಂಕದೊಂದಿಗೆ 49ನೇ ಸ್ಥಾನ, ವಡೋದರ 85 ನೇ ಸ್ಥಾನ, ಅಹಮದಾಬಾದ್ 93 ನೇ ಸ್ಥಾನ ಪಡೆದಿದೆ. ಉಳಿದಂತೆ ಜಾಗತಿಕ ಮಟ್ಟದಲ್ಲಿ ಅಬುದಾಬಿ (88.8) ಮೊದಲ, ದೋಹಾ (84.3) ದ್ವಿತೀಯ, ದುಬೈ (83.9) ಮೂರನೇ ಸ್ಥಾನ ಪಡೆದುಕೊಂಡಿದೆ.