ಬಂಟ್ವಾಳ, ಆ. 07 (DaijiworldNews/TA): ಕೃಷಿ ಚಟುವಟಿಕೆಯ ಜೊತೆಗೆ ಕೃಷಿಗೆ ಪೂರಕವಾದ ಉದ್ದಿಮೆಗಳ ಕುರಿತಾಗಿಯೂ ಕೃಷಿಕರು ಗಮನಹರಿಸಿದರೆ ಹೆಚ್ಚಿನ ಆದಾಯಗಳಿಕೆ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ. ನಗರದ ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನದ ಅಂಗವಾಗಿ ಬಿ.ಸಿರೋಡಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕಿಸಾನ್ ಗೋಷ್ಟಿ , ತರಬೇತಿ ಹಾಗೂ ಸೌಲಭ್ಯ ವಿತರಣಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.










ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರು ಅಧಿಕ ಸಂಖ್ಯೆಯಲ್ಲಿದ್ದು ಕೃಷಿಯ ಜೊತೆಗೆ ಇತರ ಕೆಲಸದಲ್ಲಿ ತೊಡಗುವವರ ಸಂಖ್ಯೆಯೂ ಅಧಿಕವಿದೆ ಎಂದ ಅವರು, ಕೃಷಿಯಷ್ಟು ಉತ್ತಮ ಕೆಲಸ ಬೇರೊಂದಿಲ್ಲ, ನಾನು ಕೂಡ ಕೃಷಿಯ ಮುಖೇನವೇ ನನ್ನ ಬದುಕನ್ನು ರೂಪಿಸಿಕೊಂಡಿದ್ದೇನೆ, ಅದರಿಂದಲೇ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ ಎಂದರು.
ಬೂಡಾ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಮಣ್ಣಿನ ಗುಣಕ್ಕೆ ಪೂರಕವಾದ ಕೃಷಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಕೃಷಿ ಉಳಿದರೆ ಮಾತ್ರ ಪ್ರಕೃತಿ ಮತ್ತು ದೇಶ ಉಳಿಯಲು ಸಾಧ್ಯವಿದೆ, ಕೃಷಿಕರನ್ನು ಪ್ರೇರೇಪಿಸುವ ಇಂತಹಾ ಕಾರ್ಯಕ್ರಮಗಳು ಗ್ರಾಮಪಂಚಾಯತ್ ಮಟ್ಟದಲ್ಲಿ ನಡೆಯಲಿ ಎಂದರು. ಇದೇ ಸಂದರ್ಭ ಕೃಷಿಯಲ್ಲಿ ಸಾಧನೆ ಮಾಡಿದ ಹಲವು ರೈತರನ್ನು ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಕೃಷಿ ಸಖಿಯರಿಗೆ ಗುರುತಿನ ಚೀಟಿಯನ್ನು ಇದೇ ಸಂದರ್ಭ ವಿತರಿಸಲಾಯಿತು. ಜೊತೆಗೆ ವಿವೇಚನಾತ್ಮಕ ಕೀಟನಾಶಕಗಳ ಬಳಕೆ ಹಾಗೂ ಬೆಳೆಗಳಲ್ಲಿ ಶೇಷಾಂಶ ತಗ್ಗಿಸಲು ಅಗತ್ಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಖಾಸಗಿ ನಿವಾಸಿಗಳಿಗೆ ಬೆಳೆಸಮೀಕ್ಷೆ ಕುರಿತು ತರಬೇತಿ ನಡೆಯಿತು.
ತೋಟಗಾರಿಕಾ ಇಲಾಖೆಯ ಸಹಾಯಕನಿರ್ದೇಶಕರಾದ ಪ್ರದೀಪ್ ಡಿಸೋಜ, ಕೃಷಿ ಇಲಾಖೆಯ ಉಪನಿರ್ದೇಶಕಿ ಕುಮುದಾ , ಸಿಪಿಸಿಆರ್ ಐ ವಿಜ್ಞಾನಿ ಡಾ.ಮಧು, ಬಂಟ್ವಾಳ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಉಪಸ್ಥಿತರಿದ್ದರು. ಕೃಷಿಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಕಡೇಶ್ವಾಲ್ಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ವ್ಯವ್ಯಸ್ಥಾಪಕಿ ದೀಕ್ಷಾ ವಂದಿಸಿದರು. ಸಿಬ್ಬಂದಿಗಳಾದ ಹಣಮಂತ ಕಾಳಗಿ, ವಿರೂಪಾಕ್ಷ ಹಡಪದ ಸಹಕರಿಸಿದರು.