ವಿಟ್ಲ, ಆ. 08 (DaijiworldNews/TA): ಕಾರೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ.

ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ನ ಮಾಲಕ ಜಗನ್ನಾಥ ಶೆಟ್ಟಿಗಾರ್ ಗಂಭೀರ ಗಾಯಗೊಂಡವರು. ಜಗನ್ನಾಥ ಶೆಟ್ಟಿಗಾರ್ ಅವರು ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರ ದ್ವಿಚಕ್ರ ವಾಹನದ ಟಯರ್ ಪಂಕ್ಚರ್ ಆಗಿತ್ತು. ಆದ್ದರಿಂದ ಅವರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲೆ ಪಕ್ಕದಲ್ಲಿ ನಿಂತಿದ್ದ ವೇಳೆ ಪುತ್ತೂರು ಭಾಗದಿಂದ ಸಾಲೆತ್ತೂರು ಕಡೆ ತೆರಳುತ್ತಿದ್ದ ಕಾರು ಅವರಿಗೆ ಡಿಕ್ಕಿಯಾಗಿದೆ.
ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಜಗನ್ನಾಥ ಶೆಟ್ಟಿಗಾರ್ ರವರನ್ನು ಕೂಡಲೇ ಸ್ಥಳೀಯರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.