ಮಂಗಳೂರು, ಆ. 08 (DaijiworldNews/AA): ನಗರದ ಜ್ಯೋತಿ-ಹಂಪನಕಟ್ಟೆ ರಸ್ತೆಯಲ್ಲಿರುವ ಬ್ಯೂಟಿ ಪಾರ್ಲರ್ ಒಂದರಲ್ಲಿ ಪುರುಷ ಗ್ರಾಹಕರಿಗೆ ಮಸಾಜ್ ನೀಡಲಾಗುತ್ತಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.




ಶುಕ್ರವಾರ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಿಳೆ, ಕಳೆದ ಒಂದೂವರೆ ತಿಂಗಳಿಂದ ತಾನು ಆ ಪಾರ್ಲರ್ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಪಾರ್ಲರ್ನ ಮಾಲೀಕರು ಪುರುಷ ಗ್ರಾಹಕರಿಗೆ ಮಸಾಜ್ ನೀಡಿ 'ಹ್ಯಾಪಿ ಎಂಡಿಂಗ್' ಮಾಡುವಂತೆ ತನಗೆ ಸೂಚಿಸಿದ್ದರು ಮತ್ತು ಇದಕ್ಕಾಗಿ ಅವರಿಂದ 500 ರಿಂದ 1,000 ರೂ. ಪಡೆಯುತ್ತಿದ್ದರು ಎಂದರು.
ಆಗಸ್ಟ್ 6 ರಂದು ಮಾಲೀಕರಿಗೆ ಪರಿಚಯವಿದ್ದ ಗ್ರಾಹಕನೊಬ್ಬ ಪಾರ್ಲರ್ಗೆ ಬಂದಿದ್ದ. "ಮಾಲೀಕರು ನನಗೆ ಅವನಿಗೆ ಮಸಾಜ್ ಮಾಡಲು ಹೇಳಿದರು. ಬೇರೆ ದಾರಿಯಿಲ್ಲದೆ ನಾನು ಮಸಾಜ್ ಮಾಡಿದೆ. ಆ ನಂತರ ಆತ ನನ್ನೊಂದಿಗೆ ಲೈಂಗಿಕ ಸಂಪರ್ಕಕ್ಕೆ ಪ್ರಯತ್ನಿಸಿದ, ಆದರೆ ನಾನು ನಿರಾಕರಿಸಿದೆ. ನಾನು ಕೊಠಡಿಯಿಂದ ಹೊರಹೋಗಲು ಪ್ರಯತ್ನಿಸಿದೆ. ಆ ಸಮಯದಲ್ಲಿ ಮಾಲೀಕರು ತನ್ನ ಮೇಲೆ ಹಲ್ಲೆ ನಡೆಸಿ, ತನ್ನದೇ ಫೋನ್ ಮೂಲಕ ಅರೆಬೆತ್ತಲೆ ಫೋಟೋಗಳನ್ನು ತೆಗೆದಿದ್ದಾರೆ ಎಂದು ಸಂತ್ರಸ್ತೆ ಮಾಹಿತಿ ನೀಡಿದ್ದಾರೆ.
ಮಾಲೀಕರು ಆ ಅರೆಬೆತ್ತಲೆ ಫೋಟೋಗಳನ್ನು ತನ್ನ ಪತಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಪತಿಯನ್ನು ಬೇರೆ ಸ್ಥಳಕ್ಕೆ ಕರೆಸಿ ಆ ಫೋಟೋಗಳನ್ನು ತೋರಿಸಿದ್ದರು. ಮಾಲೀಕರು ಪುರುಷ ಗ್ರಾಹಕರಿಗೆ ಮಸಾಜ್ ಮಾಡಲು ಒತ್ತಾಯಿಸಿ, ಇತರ ಹಲವು ಯುವತಿಯರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಮಾಲೀಕರು ತನ್ನಿಂದ 30,000 ರೂ.ಗೆ ಬೇಡಿಕೆ ಕೂಡಾ ಇಟ್ಟಿದ್ದರು ಎಂದು ಅವರು ಹೇಳಿದರು.
ಈ ಸಂಬಂಧ ಪೊಲೀಸ್ ಆಯುಕ್ತರು ಮತ್ತು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಾತನಾಡಿ, "ಪುರುಷ ಗ್ರಾಹಕರಿಗೆ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಮಹಿಳೆಯೊಬ್ಬರು ನನ್ನನ್ನು ಸಂಪರ್ಕಿಸಿ ಸಹಾಯ ಕೋರಿದ್ದರು. ಮಾಲೀಕರು ಅರೆಬೆತ್ತಲೆ ಫೋಟೋಗಳನ್ನು ತೆಗೆದು ಅವಳನ್ನು ಬ್ಲಾಕ್ಮೇಲ್ ಮಾಡುತ್ತಿದ್ದರು. ಆಗಸ್ಟ್ 6 ರಂದು ದೂರು ದಾಖಲಿಸಿದ್ದರೂ, ಎರಡು ದಿನಗಳ ನಂತರವೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ" ಎಂದು ಹೇಳಿದರು.