ಉಡುಪಿ, ಜೂ26(Daijiworld News/SS): ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷೆ ವಿಚಾರವಾಗಿ ಸಮಾಲೋಚನಾ ಸಭೆ ನಡೆದಿದ್ದು, ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಆಟೋ, ಕ್ಯಾಬ್'ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನ ಇಲ್ಲವೆ ಆಟೊವನ್ನು ಅವಲಂಬಿಸಿದ್ದಾರೆ. ಹೀಗೆ ಶಾಲೆಗೆ ಕಳುಹಿಸುವ ಪೋಷಕರು ತಮ್ಮ ಮಕ್ಕಳು ಯಾವಾಗ ಬರುತ್ತಾರೋ?, ಶಾಲಾ ವಾಹನ ಏನಾದ್ರೂ ಸಮಸ್ಯೆಯಾಯಿತಾ ಎಂಬ ಆತಂಕದಲ್ಲಿರುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಲ್ಲಿ ಕೆಲವು ಸೌಲಭ್ಯಗಳು ಇರಲೇಬೇಕೆಂಬ ನಿಯಮಗಳಿವೆ. ಆದರೆ ಜಿಲ್ಲೆಯಲ್ಲಿ ಬಹುತೇಕ ಶಾಲಾ ವಾಹನಗಳು ಅವುಗಳನ್ನು ಪಾಲನೆ ಮಾಡುತ್ತಿಲ್ಲ.
ಜಿಲ್ಲೆಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಪೋಷಕರ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ಕರೆಯಲಾಗಿತ್ತು. ಆಟೋದಲ್ಲಿ 6 ವಿದ್ಯಾರ್ಥಿಗಳಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಬಾರದು ಎಂಬ ನಿಯಮ ಇದೆ. ಆದರೆ ಆಟೋಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರು ಹೆಚ್ಚು ಪೋಷಕರಿಂದ ಕೇಳಿ ಬಂತು. ಈ ಕುರಿತು ಸಮಾಲೋಚನೆ ಮತ್ತು ವಿಚಾರ ವಿನಿಮಯ ನಡೆಯಿತು.
ಸಭೆಯಲ್ಲಿ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳ ಸುರಕ್ಷೆ ವಿಷಯದಲ್ಲಿ ಯಾವುದೇ ರಾಜಿ ಮಾಡದೆ ನಿಯಮ ಪಾಲಿಸುವಂತೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಲಾಯಿತು. ಪ್ರತೀ ಆಟೋ, ಕ್ಯಾಬ್ ಗಳಲ್ಲಿ ಸಂಚರಿಸುವ ಮಕ್ಕಳ ಹೆಸರು, ರಕ್ತದ ಗುಂಪು ಸಹಿತ ಪ್ರತಿಯೊಂದನ್ನೂ ತೂಗು ಹಾಕಬೇಕು ಎಂದೂ ತಾಕೀತು ಮಾಡಲಾಯಿತು.
ಆಟೋ, ಕ್ಯಾಬ್ ಚಾಲಕ, ಮಾಲೀಕರ ಸಭೆಯ ನೇತೃತ್ವವನ್ನು ಶಾಸಕ ರಘುಪತಿ ಭಟ್ ವಹಿಸಿದ್ದರು.