ಕುಂದಾಪುರ, ಆ. 09 (DaijiworldNews/TA): 2022ರಲ್ಲಿ ರಿಲೀಸ್ ಆದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಕರಾವಳಿಯ ಸಂಪ್ರದಾಯದ ಬಗ್ಗೆ ಹೇಳಲಾಗಿತ್ತು. ಈ ಚಿತ್ರದಲ್ಲಿ ಕಂಬಳದ ದೃಶ್ಯಗಳೂ ಇದ್ದವು. ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಹಾಗೂ ಕಂಬಳ ಪ್ರಿಯರಿಗೆ ಈ ವಿಚಾರ ಬೇಸರ ಮೂಡಿಸಿದೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಮಿಂಚಿದ್ದರು. ಅವರು ಈ ಸಿನಿಮಾಗಾಗಿ ಕಂಬಳ ಓಡಿಸೋದನ್ನು ಕಲಿತಿದ್ದರು. ಇದಕ್ಕಾಗಿ ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಬಳಕೆ ಆಗಿತ್ತು. ಈ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರು ಇಡಲಾಗಿತ್ತು. ಈ ಪೈಕಿ ಅಪ್ಪು ಕೋಣ ನಿಧನ ಹೊಂದಿದೆ ಎಂದು ಹೇಳಲಾಗಿದೆ.
ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಕೂಡ ಪಡೆದಿದ್ದರು. ಇವುಗಳ ಜೊತೆ ರಿಷಬ್ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಒಂದು ಕೋಣ ನಿಧನ ಹೊಂದಿದೆ. ಅಪ್ಪು ಹಾಗೂ ಕಾಲಾ ಕೋಣಗಳು ನಿಜ ಜೀವನದಲ್ಲೂ ಸಾಕಷ್ಟು ಅವಾರ್ಡ್ ಗೆದ್ದಿವೆ. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಈಗ ಅಗಲಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.