ಮಂಗಳೂರು /ಉಡುಪಿ,ಆ. 09 (DaijiworldNews/AK): ಎರಡು ತಿಂಗಳ ಮೀನುಗಾರಿಕೆ ನಿಷೇಧದ ಬಳಿಕ ಮತ್ತೆ ಸಮುದ್ರ ಕರಾವಳಿಯಲ್ಲಿ ಮೀನುಗಾರಿಕೆ ಚಟುವಟಿಕೆ ಪುನರಾರಂಭಗೊಂಡಿದ್ದು, ಸಾವಿರಾರು ಮೀನುಗಾರರು ಸಮುದ್ರಕ್ಕೆ ಮರಳುತ್ತಿದ್ದಾರೆ.






ಪ್ರತಿಕ್ಷಣವು ಕಡಲಿನ ಅಲೆಯ ನಡುವೆ ಹೋರಾಡುತ್ತಾ ಮೀನುಗಾರಿಕೆ ನಡೆಸುವ ಮೀನುಗಾರರು ಯಾವುದೇ ಅಪಾಯ ಎದುರಾಗದಿರಲಿ ಎಂದು ಸಮುದ್ರ ರಾಜನಿಗೆ ಶನಿವಾರ ಪೂಜೆ ಸಲ್ಲಿಸಿದರು. ಸಮುದ್ರಕ್ಕೆ ಹಾಲೆರೆದು, ಹೂವು, ಹಣ್ಣು ಮತ್ತು ವೀಳ್ಯದೆಲೆಗಳನ್ನು ಅರ್ಪಿಸಿ 'ಸಮುದ್ರ ರಾಜ'ನನ್ನು ಗೌರವಿಸಲಾಯಿತು. ಮೀನುಗಾರರು ಅಪ್ರತಿಮ ಸಾಹಸಿಗಳು, ಬೋಟ್ಗಳಲ್ಲಿ ಬಲೆಗಳನ್ನು ತುಂಬಿಕೊಂಡು ಕಡಲಿಗೆ ಇಳಿದರೆ 15 ದಿನ ಸಮುದ್ರ ಬಿಟ್ಟು ದಡಕ್ಕೆ ಬರುವುದಿಲ್ಲ.
ಮೀನುಗಾರಿಕೆ ಇಂದಿನಿಂದ ಸಾಂಪ್ರದಾಯಿಕವಾಗಿ ಆರಂಭವಾಗಿದೆ. ಆಳಸಮುದ್ರದಲ್ಲಿ ಪರ್ಸಿನ್ ಬೋಟ್ ಸೇರಿದಂತೆ ಸಾವಿರಾರು ಬೋಟ್ಗಳು ಇಂದಿನಿಂದ ಬೃಹತ್ ಪ್ರಮಾಣದ ಮೀನುಗಾರಿಕೆಯಲ್ಲಿ ತೊಡಗಲಿವೆ. ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಪ್ರಾರ್ಥಿಸುವ ಸಲುವಾಗಿ ಇಂದು ಕಡಲ ಮಕ್ಕಳು ಸಮುದ್ರಕ್ಕೆ ಪೂಜೆಯನ್ನು ಮಾಡಿದರು. ಸಮುದ್ರಕ್ಕೆ ಹಾಲೆರೆದು ಸಮುದ್ರ ರಾಜನ ಆರಾಧನೆ ಮಾಡಿದರು.
ಮಲ್ಪೆ ಕಡಲ ತೀರದಲ್ಲಿರುವ ವಡಭಾಂಡೇಶ್ವರ ಬಲರಾಮ ಸನ್ನಿಧಾನದಲ್ಲಿ ಸೇರಿದ ಮೀನುಗಾರರು ಬಲರಾಮ, ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ಪ್ರಸಾದ ಕೈಯಲ್ಲಿ ಹಿಡಿದು ಕಡಲ ಕಿನಾರೆಗೆ ಮೆರವಣಿಗೆ ಮೂಲಕ ಆಗಮಿಸಿ, ಪೂಜೆ ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಸಮುದ್ರಕ್ಕೆ ದೇವರ ಪ್ರಸಾದವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಅಬ್ಬರಿಸುವ ಕಡಲಿಗೆ ಹಾಲೆರುದು ಸಮುದ್ರ ರಾಜನ ಆಶಿರ್ವಾದ ಪಡೆಯುವುದು ಸಂಪ್ರದಾಯ. ಅದರಂತೆ ಸೀಯಾಳ, ಫಲಪುಷ್ಪವನ್ನು ಸಮುದ್ರ ರಾಜನಿಗೆ ಸಮರ್ಪಿಸಲಾಯಿತು.
ಕಡಲಿನಲ್ಲಿ ಮೀನುಗಾರಿಕೆ ವೇಳೆ ನೂರೆಂಟು ಅಪಾಯಗಳು ಎದರುಗಾತ್ತವೆ. ಯಾವುದೇ ಅನಾಹುತ ಆಗದೆ ಉತ್ತಮ ಮೀನುಗಾರಿಕೆ ಆಗಲಿ ಅಂತ ಸಮುದ್ರ ರಾಜನಲ್ಲಿ ಪ್ರಾರ್ಥಿಸಲಾಯಿತು.