ಬಂಟ್ವಾಳ, ಆ. 10(DaijiworldNews/TA): ದ.ಕ. ಜಿಲ್ಲಾಡಳಿತ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇವರ ವತಿಯಿಂದ ಫೋಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಚಟುವಟಿಕೆ ಕುದ್ಕುಂಜೆ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.



ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ್ ಶೆಟ್ಟಿ ಹೊಳ್ಳರಗುತ್ತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಬಡತನದ ಅ ಕಾಲದಲ್ಲಿ ಪ್ರಕೃತಿಯಲ್ಲಿ ಸಿಗುವ ಹಣ್ಣು ಹಂಪಲು ಸಹಿತ ಸಸ್ಯಗಳನ್ನು ತಿನ್ನುತ್ತಿದ್ದು, ಆಟಿ ತಿಂಗಳಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಟಿ ತಿಂಗಳ ಆಚರಣೆಯಾಗಿ ಮಾರ್ಪಾಟು ಹೊಂದುತ್ತಿದೆ.
ಆಟಿ ತಿಂಗಳ ತಿಂಡಿತಿನಸುಗಳ ಬಗ್ಗೆ ಯುವ ಜನತೆಗೆ ತಿಳಿಸುವ ಕಾರ್ಯ ಆಗಬೇಕು ಎಂದರು. ಎಳೆಯ ಮಕ್ಕಳಿಗೆ ಆಟಿ ತಿಂಗಳ ವಿಶೇಷತೆಯ ಅರಿವು ಮೂಡಿದಾಗ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸರಪಾಡಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳಾದ ಕೊರಗಪ್ಪ ಗೌಡ ಪಠಣ, ನಾರಾಯಣ ಪೂಜಾರಿ ಬೊಳ್ಳೂರು, ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ವಸಂತಿ ಪಠಣ,ಪ್ರಗತಿಪರ ಕೃಷಿಕ ಮನೋಹರ ಬೊಳ್ಳೂರು, ಶರಭೇಶ್ವರ ದೇವಸ್ಥಾನದ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಕೊಪ್ಪಳ, ಪ್ರಮುಖರಾದ ದಯಾನಂದ ಪೂಜಾರಿ ಕೋಡಿ, ವಿನಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.