ಪುತ್ತೂರು, ಆ. 10 (DaijiworldNews/AA): ಕೆದಿಲ ಗ್ರಾಮದ ಕಾಂತುಕೋಡಿ ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ದಿನದಿಂದ ನಾಪತ್ತೆಯಾಗಿದ್ದ ಆಕೆಯ ಬಾವ ಭಾನುವಾರ ಬೆಳಗ್ಗೆ ಮನೆಯಂಗಳದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಕೆದಿಲ ವಳಂಕುಮೇರಿ ನಿವಾಸಿ ಗಣಪತಿ ಯಾನೆ ರಾಮಣ್ಣ ಗೌಡ ಅವರ ಪತ್ನಿ ಮಮತಾ ಅವರ ಮೃತದೇಹ ಆ.6 ರಂದು ಕೆದಿಲ ಗ್ರಾಮದ ಕಾಂತುಕೋಡಿ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ರಾಮಣ್ಣ ಗೌಡ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ಅವರು ನಾಪತ್ತೆಯಾಗಿದ್ದರು.
ಮಮತಾ ಅವರ ಸಾವಿನ ಬಗ್ಗೆ ಅನುಮಾನ ಮೂಡಿದ್ದರಿಂದ ಪತಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ತಮ್ಮ ಸಹೋದರ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಪತ್ತೆಗಾಗಿ ಕೆದಿಲ ಪರಿಸರದ ಕಾಡಿನಲ್ಲಿ ಪತ್ತೆ ಕಾರ್ಯ ಆರಂಭಿಸಿದ್ದರು. ಆದರೆ ಲೋಕಯ್ಯ ಗೌಡ ಅವರು ಪತ್ತೆಯಾಗಿರಲಿಲ್ಲ. ಇದೀಗ 4 ದಿನಗಳಿಂದ ಬಳಿಕ ಲೋಕಯ್ಯ ಗೌಡ ಅವರು ತನ್ನ ಮನೆಗೆ ಮರಳಿದ್ದಾರೆ. ಅವರನ್ನು ನೋಡಿ ಮನೆ ಮಂದಿ ಹಿಡಿದಿಟ್ಟುಕೊಂಡು ಮಮತಾ ಅವರ ಕೊಲೆ ಬಗ್ಗೆ ವಿಚಾರಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.