ಬಂಟ್ವಾಳ, ಆ. 10 (DaijiworldNews/AA): ದಕ್ಷಿಣ ಭಾರತದ ಪ್ರಸಿದ್ದ ಕ್ಷೇತ್ರಗಳಲ್ಲೊಂದಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಎಡಪಂಥಿಯರು ಸಹಿತ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಾಮಿಕನ ದೂರಿನ ಹಿನ್ನಲೆಯಲ್ಲಿ ಎಸ್ಐಟಿ ತಂಡ ತನಿಖೆ ನಡೆಸುತ್ತಿರುವ ಹಂತದಲ್ಲಿಯೇ ಯಾರನ್ನೋ ಅಪರಾಧಿಗಳೆಂದು ಬಿಂಬಿಸುವುದು, ಹಿಂದೂಗಳ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅವಹೇಳನ ಮಾಡುವುದು ಖಂಡನೀಯವಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಜನಕಲ್ಯಾಣದ ಹತ್ತಾರು ಕಾರ್ಯಕ್ರಮಗಳ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿದ್ದು, ಲಕ್ಷಾಂತರ ಕುಟುಂಬಗಳು ಇದರ ಸದುಪಯೋಗ ಪಡೆದು ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ಸರಕಾರ ನೇಮಕಗೊಳಿಸಿದ ತನಿಖಾ ತಂಡ ತನಿಖೆ ಇನ್ನು ತಮ್ಮ ತನಿಖೆಯನ್ನು ಪೂರ್ಣಗೊಳಿಸುವ ಮೊದಲೇ ಕೆಲ ಸ್ಥಾಪಿತಹಿತಾಸಕ್ತಿಗಳು ತಾವೇ ನ್ಯಾಯಾಧೀಶರಂತೆ ತೀರ್ಮಾನ ಕೊಟ್ಟು ಅಪರಾಧಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ತುಂಗಪ್ಪ ಬಂಗೇರ ಹೇಳಿದರು.
ಈ ಪ್ರಕರಣದಲ್ಲಿ ಎಡಪಂಥಿಯರು ವಿನಾಕಾರಣ ಮೂಗುತೂರಿಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರದಲ್ಲಿ ತೊಡಗಿದ್ದಲ್ಲದೆ ದೇಶದಲ್ಲಿ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ ಎಂದೇಳಿ ಯೂಟ್ಯೂಬ್ ಸೃಷ್ಠಿಸಿ ಕ್ಷೇತ್ರದ ಹಾಗೂ ಡಾ.ಹೆಗ್ಗಡೆಯವರ ಕುರಿತು ಅವಹೇಳನಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಮತ್ತು ಇದು ಖಂಡನೀಯವಾಗಿದೆ. ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಸೌಜನ್ಯ ಎಂಬ ಹೆಣ್ಣುಮಗುವಿನ ಜತೆಗೆ ಯಾರೇ ಅನ್ಯಾಯಕ್ಕೊಳಗಾದರೂ ಅವರಿಗೆ ನ್ಯಾಯ ಸಿಗಲೇಬೇಕು ಇದರಲ್ಲಿ ಎರಡು ಮಾತಿಲ್ಲ. ತನಿಖೆಯಿಂದ ನೈಜ ಆರೋಪಿಗಳು ಯಾರೆಂಬ ಸತ್ಯ ಹೊರಬರಲಿ ಎಂದರು.
ದ.ಕ.ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಹಲವಾರು ಕ್ಲಿಷ್ಟ ಪ್ರಕರಣಗಳನ್ನು ಬೇಧಿಸಿರುವ ದಕ್ಷ ಪೊಲೀಸ್ ಅಧಿಕಾರಿಗಳಿದ್ದರೂ ಅವರಿಂದ ತನಿಖೆ ಮಾಡಿಸದೆ ಶವ ಹೂತಿಟ್ಟ ಪ್ರಕರಣದ ತನಿಖೆಗಾಗಿ ಸರಕಾರ ಎಸ್ಐಟಿ ರಚನೆ ಮಾಡಿರುವುದನ್ನು ಗೃಹ ಮಂತ್ರಿಗಳು ಸ್ಪಷ್ಟಪಡಿಸಬೇಕು. ದೂರುದಾರನನ್ನು ತನ್ನ ವಶದಲ್ಲಿರಿಸಿಕೊಳ್ಳದೆ ತನಿಖೆ ನಡೆಸುತ್ತಿರುವುದು ಸಾರ್ವಜನಿಕರಲ್ಲ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ದೂರುದಾರನನ್ನು ಮೊದಲು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ನಾವೂರು ಹಾಲು ಉ.ಸ.ಸಂಘದ ಅಧ್ಯಕ್ಷ ಸದಾನಂದ ಗೌಡ ನಾವುರು, ಬಂಟ್ವಾಳ ವ್ಯ.ಸೇ.ಸ.ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಯೋಗಿಶ್ ಪೂಜಾರಿ ಅತ್ತಾಜೆ ಉಪಸ್ಥಿತರಿದ್ದರು.