ಕುಂದಾಪುರ, ಆ. 11 (DaijiworldNews/AK): ಕರ್ನಾಟಕ ಸರ್ಕಾರ ನೇಮಕ ಮಾಡಿದ ಎಸ್ಐಟಿ ತಂಡ ಧರ್ಮಸ್ಥಳದ ಮಂಜುನಾಥ ಸ್ವಾಮಿಯಾಗಲೀ ಅಣ್ಣಪ್ಪ ಸ್ವಾಮಿಯಾಗಲೀ ಅಥವಾ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಸುವ ತನಿಖೆಗಾಗಿ ಅಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಸಂಘಟನೆಯ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಧಮನಿತರ, ಶೋಷಿತರ ಪರವಾಗಿದೆ. ಅಲ್ಲದೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಇದೇ ಕಾರಣಕ್ಕೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಆರೋಪದ ಪ್ರಕರಣಗಳಿಗೆ ಸಂಬಂಧಿಸಿ ನಿಷ್ಪಕ್ಷಪಾತದ ತನಿಖೆಗೆ ಕಾಂಗ್ರೆಸ್ ಸರ್ಕಾರ ಎಸ್ಐಟಿ ತಂಡ ರಚಿಸಿದೆ. ಇದು ಯಾವುದೇ ವ್ಯಕ್ತಿ, ಧರ್ಮ ಅಥವಾ ನಂಬಿಕೆಗಳ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕರಾವಳಿಯ ಕೆಲವು ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ನಾಗೇಂದ್ರ ಪುತ್ರನ್ ಅವರು, ಕಾರ್ಕಳದ ಶಾಸಕ ಸುನಿಲ್ ಕುಮಾರ್ ಧರ್ಮ ಜಾಗೃತಿಯ ಬಗ್ಗೆ ನಮಗೆ ಪಾಠ ಮಾಡಬೇಕಾಗಿಲ್ಲ. ಮೊದಲು ಅವರು ಕಾರ್ಕಳದ ಪರಶುರಾಮ ಥೀಂ ಪಾರ್ಕನ್ನು ಒಮ್ಮೆ ನೋಡಿಕೊಳ್ಳಲಿ. ನಮ್ಮ ಹಿಂದಿನ ತಲೆಮಾರುಗಳಿಂದ ನಾವು ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರವನ್ನು ನಂಬಿಕೊಂಡು ಬಂದಿದ್ದೇವೆ. ನಮಗೆ ಧರ್ಮ, ದೇವರುಗಳು ಹಾಗೂ ಶ್ರದ್ಧಾ ಕೇಂದ್ರಗಳ ಬಗ್ಗೆ ಬಿಜೆಪಿಗರು ಪಾಠ ಮಾಡುವ ಅಗತ್ಯವಿಲ್ಲ ಎಂದರು.
ಮುಂದಿನ ಚುನಾವಣೆಯ ಗುರಿಯಿಟ್ಟುಕೊಂಡು ಬಿಜೆಪಿ ಧರ್ಮಸ್ಥಳ ಲಕ್ಕೆ ಸಂಬಂಧಿಸಿದಂತೆ ಹೊಸ ನಾಟಕ ಆರಂಭಿಸಿದೆ. ಇಂತಹ ನಾಟಕಗಳಿಗೆ ಜನ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.