ಉಡುಪಿ, ಆ. 12 (DaijiworldNews/TA): ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು, ಕರ್ಕಶ ಶಬ್ಧ ಮಾಡಿಕೊಂಡು ಹೋಗುತ್ತಿದ್ದ ಕಾರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದ ಕೇರಳದ ಕಣ್ಣೂರು ನಿವಾಸಿ ಶೋಹೈಲ್ ನೀಲಾಕತ್(26)ನನ್ನು ವಶಕ್ಕೆ ಪಡೆಯಲಾಗಿದೆ.

ಚಾಲಕ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಆಕಾಶ ನೀಲಿ ಬಣ್ಣದ ಕಾರಿಗೆ ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಅಜಾಗರೂಕತೆಯಿಂದ, ಕರ್ಕಶ ಶಬ್ದ ಮಾಡಿಕೊಂಡು ಇತರೆ ಪ್ರಯಾಣಿಕರಿಗೆ ತೊಂದರೆ ಆಗುವಂತೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಕಾರಿನಲ್ಲಿ ಯಾವುದಾದರೂ ಅಕ್ರಮವಾಗಿ ವಸ್ತುಗಳನ್ನು ಸಾಗಿಸುವ ಬಗ್ಗೆ ಅನುಮಾನಗೊಂಡ ಪೊಲೀಸರು, ಕಾರನ್ನು ಹಿಂಬಾಲಿಸಿಕೊಂಡು ಎಂಐಟಿ ಜಂಕ್ಷನ್ ಬಳಿ ತಡೆ ಹಿಡಿದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ಶೋಬೈಲ್ ನೀಲಾಕತ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.