ಬಂಟ್ವಾಳ, ಆ. 12 (DaijiworldNews/TA): ಮನೆ,ದೇವಸ್ಥಾನ,ಅಂಗಡಿ ಹೀಗೆ ಬೇರೆ ಬೇರೆ ವಾಣಿಜ್ಯ ಕೇಂದ್ರಗಳಿಂದ ಕಳ್ಳತನ ನಡೆಯುವುದು ಕೇಳಿದ್ದೇವೆ. ಆದರೆ ಇದೀಗ ರುದ್ರಭೂಮಿಯನ್ನು ಬಿಡದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಬಗ್ಗೆ ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ್ ಅವರು ತಿಳಿಸಿದ್ದಾರೆ.




ಅಮ್ಟಾಡಿ ಗ್ರಾಮದ ದೇವಿನಗರ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಹೆಣ ಸುಡುವ ಸಿಲಿಕಾನ್ ಚೇಂಬರ್, ಹಿತ್ತಾಳೆಯ ನೀರಿನ ನಲ್ಲಿ, ಕಬ್ಬಿಣದ ಏಣಿ,ಕಬ್ಬಿಣದ ಗೇಟ್ ಹಾಗೂ ಇನ್ನಿತರ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅಗಸ್ಟ್ 11 ರಂದು ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿ ಎಂಬವರ ಮೃತದೇಹದ ದಹನ ಮಾಡಲು ರುದ್ರಭೂಮಿಗೆ ತೆರಳಿದಾಗ ಕಳವು ಮಾಡಿದ ಬಗ್ಗೆ ಬೆಳಕಿಗೆ ಬಂದಿದೆ.
ಕಳ್ಳತನ ಪ್ರಕರಣದ ಕುರಿತು ಅಮ್ಟಾಡಿ ಗ್ರಾಮ ಪಂಚಾಯತ್ ನ ವತಿಯಿಂದ ಇಂದು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ವಿಜಯ್ ಅವರು ತಿಳಿಸಿದ್ದಾರೆ. ಅಮ್ಟಾಡಿ ಗ್ರಾಮದಲ್ಲಿ ಕೆಲವು ದಿನಗಳಿಂದ ಕಳ್ಳರ ಹಾವಳಿ ಕಂಡು ಬಂದಿದ್ದು, ಮನೆಯ ಹೊರಗಡೆ ನಿಲ್ಲಿಸಿರುವ ವಾಹನಗಳ ಸಹಿತ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸಿ ಜಾಗೃತೆಯಿಂದ ಇರುವಂತೆ ವಿಜಯ್ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.