ಉಡುಪಿ, ಆ. 13 (DaijiworldNews/AA): ಮರಳುಗಾರಿಕೆಗೆ ನಿಷೇಧವಿದ್ದರೂ, ಉಡುಪಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿ ಮುಂದುವರೆದಿದ್ದು, ಈ ವಾರದಲ್ಲಿ ಪೊಲೀಸರು ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 11 ರಂದು, ಬ್ರಹ್ಮಾವರ ಪೊಲೀಸರು ಯಡ್ತಾಡಿಯಿಂದ ಹೇರಾಡಿಗೆ ಸುಮಾರು 1.5 ಯೂನಿಟ್ ಮರಳನ್ನು ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ ಟಿಪ್ಪರ್ ಅನ್ನು ತಡೆದಿದ್ದಾರೆ. ಚಾಲಕ ಸರ್ಕಾರಕ್ಕೆ ರಾಯಲ್ಟಿ ಪಾವತಿಸದೇ ನದಿಯಿಂದ ಅಂದಾಜು 8,000ರೂ. ಮೌಲ್ಯದ ಮರಳನ್ನು ಸಾಗಿಸಲಾಗುತ್ತಿತ್ತು.
ಬ್ರಹ್ಮಾವರದ ಕುಕ್ಕುಡೆ ಐಎಸ್ಎಫ್ ಫ್ಯಾಕ್ಟರಿ ಬಳಿ ಕುಕ್ಕುಡೆ ಕಡೆಯಿಂದ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ವಾಹನ ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದ. ಬಳಿಕ ವಾಹನವನ್ನು ಪರಿಶೀಲಿಸಿದಾಗ ಸುಮಾರು 0.75 ಯುನಿಟ್ನಷ್ಟು ಮರಳಿತ್ತು. ಯಾವುದೇ ದಾಖಲೆಗಳು ಇಲ್ಲದೇ ಸಾಗಿಸಲಾಗುತ್ತಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆರಡೂ ಪ್ರಕರಣ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದೆ.
ಕಸಬಾ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಮರಳನ್ನು ತೆಗೆದು ಎರಡು ವಾಹನಗಳಲ್ಲಿ ತುಂಬಿಸುತ್ತಿರುವ ಬಗ್ಗೆ ಆ. 5 ರಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ದಾಳಿ ನಡೆಸಿದಾಗ ಸುಮಾರು 4 ಸಾವಿರ ರೂ. ಮೌಲ್ಯದ 80 ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ಪತ್ತೆಯಾಯಿತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಕುಳುಂಜೆ ಗ್ರಾಮದ ಬಾಕುಡೆಯಲ್ಲಿ ಚರಣ ಹೆಗ್ಡೆ, ಮಹೇಶ ಹಾಲಾಡಿ ಮತ್ತು ಸುಧೀರ ಹೆಗ್ಡೆ ಅವರು ಆ. 9 ರಂದು ತಡರಾತ್ರಿ ಶೇಡಿಮನೆ ಹೊಳೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಸಾಗಿಸಲು 3 ಟಿಪ್ಪರ್ ಲಾರಿಗಳಲ್ಲಿ ಮರಳನ್ನು ತುಂಬಿಸಿದ್ದರು. ಈ ಸಂದರ್ಭ ಪೊಲೀಸರು ದಾಳಿ ನಡೆಸಿದಾಗ ಸುಮಾರು 45 ಸಾವಿರ ರೂ. ಮೌಲ್ಯದ 9 ಯುನಿಟ್ ಮರಳು ಹಾಗೂ 18 ಲ.ರೂ. ಮೌಲ್ಯದ 3 ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚರಣ್ ಹೆಗ್ಡೆಯನ್ನು ಆ. 11 ರಂದು ಬೆಳ್ವೆ ಗ್ರಾಮದ ತಾರೆಕಟ್ಟೆ ಬಳಿ ವಶಕ್ಕೆ ಪಡೆಯಲಾಗಿದೆ.
ಅಕ್ರಮ ಮರಳುಗಾರಿಕೆ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಪಿಕಪ್ ಸಹಿತ ಸಣ್ಣ ವಾಹನಗಳಲ್ಲಿಯೂ ಈಗ ಮರಳು ಸಾಗಿಸುತ್ತಿದ್ದು, ಈ ಕಾರ್ಯಾಚರಣೆ ಬೆಳಗ್ಗೆಯಿಂದಲೇ ರಾಜಾರೋಷವಾಗಿ ನಡೆಯುತ್ತಿದೆ. ಮೀನು ಸಾಗಣೆ ವಾಹನ ಅಂದುಕೊಳ್ಳುವ ಕಾರಣ ಆರೋಪಿಗಳು ಪೊಲೀಸರ ಕಣ್ಡಪ್ಪಿಸಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿ ಮರಳು ಸಾಗಿಸುವವರು ಇದಕ್ಕಾಗಿ ದಾಖಲೆಗಳು ಇಲ್ಲದ ಹಳೆಯಲಾರಿಗಳನ್ನು ಬಳಸುವುದಿದೆ. ಪೊಲೀಸರು ವಶಪಡಿಸಿಕೊಂಡರೂ ಸಮಸ್ಯೆ ಇಲ್ಲ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ. ಅಕ್ರಮ ಮರಳುಗಾರಿಕೆಯ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಯಲಿದ್ದು, ಒಂದು ವಾರದಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ಹಲರನ್ನು ಬಂಧಿಸಿ, ಮರಳು ಹಾಗೂ ಸಾಗಣೆಗೆ ಬಳಸಿದ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.