ಮಂಗಳೂರು, ಆ. 13 (DaijiworldNews/TA): ನೈರುತ್ಯ ರೈಲ್ವೆ ವಲಯವು ರೈಲು ಸಂಖ್ಯೆ 07377/78 ವಿಜಯಪುರ –ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸಿ ಓಡಿಸುವ ಬಗ್ಗೆ ಅಧಿಕೃತವಾಗಿ ಪ್ರಕಟನೆಯನ್ನು ಹೊರಡಿಸಿದೆ.

ಇದರ ಅನ್ವಯ ವಿಜಯಪುರದಿಂದ ಸೆಪ್ಟೆಂಬರ್ 1 ಹಾಗೂ ಮಂಗಳೂರು ಸೆಂಟ್ರಲಿನಿಂದ ಸೆಪ್ಟೆಂಬರ್ 2ರಿಂದ ಈ ರೈಲು ಖಾಯಂ ರೈಲಾಗಿ ಓಡಲಿದೆ. ಈ ರೈಲನ್ನು ಖಾಯಂಗೊಳಿಸಲು ಪ್ರಯಾಣಿಕರ ಸಂಘಗಳ ನಿರಂತರ ಹೋರಾಟ,ನಾಗರಿಕರು ಹಾಗೂ ವಿವಿಧ ಸಂಘಟನೆಗಳಿಂದ ನಿರಂತರ ಬೆಂಬಲ ಮತ್ತು ಸತತ ಪ್ರಯತ್ನ , ಸಂಸದರಿಂದ ದೊರೆತ ಬೆಂಬಲ, ರಾಮೇಶ್ ಜಿಗಜಿಣಗಿ ಅವರ ವಿಶೇಷ ಪ್ರಯತ್ನವಿದೆ.
ಈ ನಿರ್ಧಾರದಿಂದ ಸುಬ್ರಹ್ಮಣ್ಯ, ಧರ್ಮಸ್ಥಳ, ಬಂತ್ವಾಳ, ಪುತ್ತೂರು ಹಾಗೂ ಇತರ ನಗರಗಳಿಂದ ಹಾಸನ, ಹುಬ್ಬಳ್ಳಿ, ಗದಗ, ವಿಜಯಪುರ ಹಾಗೂ ಇನ್ನಿತರೆ ಕಡೆಗಳಿಗೆ ಹೋಗುವ ಭಕ್ತರು, ವಿದ್ಯಾರ್ಥಿಗಳು ಮತ್ತು ಇತರೇ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.