ಉಳ್ಳಾಲ, ಆ. 14 (DaijiworldNews/TA): ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್" ಎಂಬ ಘೋಷಣೆ ಅಡಿಯಲ್ಲಿ ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಿಂದ 9 ರ ತನಕ ನಡೆಯಲಿರುವ ಯುವಜನ ಜಾಥಾದ ಯಶಸ್ವಿಗಾಗಿ ಮುಡಿಪು ವಲಯ ಮಟ್ಟದ ಸ್ವಾಗತ ಸಮಿತಿ ರಚಿಸಲಾಯಿತು.

ಸ್ವಾಗತ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸರಕಾರದ ಹಲವು ತಪ್ಪಾದ ನೀತಿಗಳಿಂದ ಭಾರತದ ಯುವ ಜನತೆ ನಿರುದ್ಯೋಗಿಗಳಾಗಿ ಬದಲಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಡೆಗಣಿಸುತ್ತಿವೆ. ಯುವ ಜನರಿಗೆ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿ ಆಡಳಿತಕ್ಕೆ ಬಂದಿರುವ ಕೇಂದ್ರ ಸರಕಾರ ಯುವ ಜನತೆಗೆ ಮೋಸ ಮಾಡಿದೆ ಎಂದು ತಿಳಿಸಿದರು.
ಮುಡಿಪುವಿನಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ, ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಪುಂಡರಿಕಾಕ್ಷ, ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಜಲ್ಲಿ, ಅಬ್ದುಲ್ ಖಾದರ್ ಸಣ್ಣಬೈಲ್, ಹರೀಶ್ ಕುಮಾರ್ ಇರಾ, ಕರೀಂ ಗುದುರು, ಕಾರ್ಯಾಧ್ಯಕ್ಷರಾಗಿ ರಫೀಕ್ ಹರೇಕಳ, ಅಧ್ಯಕ್ಷರಾಗಿ ರಝಾಕ್ ಮುಡಿಪು, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಮೊಂಟೆಪದವು, ಕೋಶಾಧಿಕಾರಿಯಾಗಿ ಅಲ್ತಾಫ್ ಉಸ್ಮಾನ್, ಹಾಗೂ 63 ಸದಸ್ಯರ ಸಮಿತಿ ರಚಿಸಲಾಯಿತು. ಡಿವೈಎಫ್ಐ ಮುಡಿಪು ಘಟಕ ಅಧ್ಯಕ್ಷ ಅಲ್ತಾಫ್ ಸಭೆಯ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಡಿವೈಎಫ್ಐನ ಹಲವು ನಾಯಕರು ಉಪಸ್ಥಿತರಿದ್ದರು.