ಕುಂದಾಪುರ, ಆ. 14 (DaijiworldNews/TA): ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಸ್ಥೆ ಕುಂದಾಪುರ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 'ವಿಜಯ ಪಥ' ಎಂಬ ವಿಶಿಷ್ಟ ಕಾರ್ಯಕ್ರಮ ಬಸ್ರೂರಿನ, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಸ್ರೂರಿನ ಯೋಧ ದೀಪಕ್ ಕುಮಾರ್ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ದೀಪಕ್ ಕುಮಾರ್, ಕಠಿಣ ಪರಿಶ್ರಮದಿಂದ ಮತ್ತು ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶಪ್ರೇಮ ರಕ್ತದಲ್ಲಿಯೇ ಬರಬೇಕು. ಆಗ ಮಾತ್ರವೇ ನನ್ನ ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಉಳಿಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ದೇವಾನಂದ ಶೆಟ್ಟಿ ಹಳ್ಳಾಡು ಮಾತನಾಡಿ, ದೇಶಕ್ಕಾಗಿ ತಮ್ಮ ತಮ್ಮ ಪ್ರಾಣವನ್ನೇ ಪಣವಾಗಿಟ್ಟು, ಗಡಿ ಭಾಗಗಳಲ್ಲಿ ಹೋರಾಡುವ ವೀರ ಸೈನಿಕರಿಗೆ ಗೌರವಿಸಿ ಸನ್ಮಾನಿಸುವುದು, ಯುವಜನತೆ ಮತ್ತು ಮಕ್ಕಳಿಗೆ ಸ್ಪೂರ್ತಿ ನೀಡುತ್ತದೆ ಎಂದರು. ಮಾಜಿ ಯೋಧ ಸತ್ಯನಾರಾಯಣ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಕೋಟ ಪಡುಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಡಾಕ್ಟರ್ ರಮೇಶ್ ಆಚಾರ್ಯ ದಿಕ್ಸೂಚಿ ಭಾಷಣ ಮಾಡಿದರು.
ಉದ್ಯಮಿ, ಬ್ರಹ್ಮಾವರದ ಪ್ರವೀಣ ಕುಮಾರ್ ಶೆಟ್ಟಿ, ನಿವೃತ್ತ ಯೋಧ, ಗಣಪತಿ ಖಾರ್ವಿ ಬಸ್ರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹುಟ್ಟೂರ ಸನ್ಮಾನ ಕಾರ್ಯಕ್ರಮಕ್ಕೆ ಮುನ್ನ, ವೀರಯೋಧ ದೀಪಕ್ ಕುಮಾರ್ ಅವರನ್ನು, ಕುಂದಾಪುರದ ಮುಖ್ಯರಸ್ತೆಯಲ್ಲಿ ಪುರಮೆರವಣಿಗೆ ಮಾಡಲಾಯಿತು. ಬಳಿಕ, ಕುಂದಾಪುರದಿಂದ ಬಸ್ರೂರು ಮೂರ್ ಕೈ ಮಾರ್ಗವಾಗಿ, ಬಸ್ರೂರು ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ, ಹುಟ್ಟೂರ ಸನ್ಮಾನಕ್ಕೆ ಕರೆತರಲಾಯಿತು. ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಸನ್ಮಾನಿತರನ್ನು ಕರೆತಂದ ಪರಿ ಆಕರ್ಷಣೀಯವಾಗಿತ್ತು.