ಕುಂದಾಪುರ, ಜೂ 26 (Daijiworld News/SM): ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಬೈಂದೂರು ತಾಲೂಕಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. 25 ಸಾವಿರ ರೈತರು ಇರುವ ತಾಲೂಕಿನಲ್ಲಿ ಕೇವಲ ೫ ಸಾವಿರ ಕೃಷಿ ಕುಟುಂಬಗಳನ್ನು ಅಪ್ಲೋಡ್ ಆಗಿರುವುದು ತೃಪ್ತಿಕರವಾಗಿಲ್ಲ. ನಿಗದಿತ ದಿನಾಂಕದೊಳಗೆ ಅಷ್ಟೂ ಕೃಷಿಕರನ್ನು ನೊಂದಾಯಿಸಿ, ಆರ್ಹ ಎಲ್ಲಾ ರೈತರಿಗೂ ಇದರ ಪ್ರಯೋಜನ ಸಿಗುವಂತಾಗಬೇಕು. ಸರ್ವರ್ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು, ಅಧಿಕಾರಿಗಳು ರೈತ ಸ್ನೇಹಿಯಾಗಿ ಕೆಲಸ ಮಾಡಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಬೈಂದೂರು ಪ್ರವಾಸಿ ಬಂಗಲೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಐಆರ್ಬಿ ಇಲಾಖೆಯ ಕಾಮಗಾರಿ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ನಡೆದಿದೆ ಎನ್ನುವ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗುತ್ತಿಗೆದಾರರು ಅಧಿಕಾರಿಗಳು ಕೂಡಲೇ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಶಿರೂರಿನಲ್ಲಿ ಸರ್ವೀಸ್ ರಸ್ತೆ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಆತಂಕ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣವಾಗದೇ ಟೋಲ್ ಸಂಗ್ರಹ ಮಾಡಿದರೆ ಗುತ್ತಿಗೆದಾರ ಕಂಪೆನಿ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾರಾಹಿ ಯೋಜನೆ ಇರುವುದು ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ. ಆದರೆ ಈ ತನಕ ಉಡುಪಿ ಮತ್ತು ಕುಂದಾಪುರಕ್ಕೆ ನೀರು ಸಿಗುತ್ತಿತ್ತು. ಮುಂದೆ ವಾರಾಹಿ ಬಲದಂಡೆ ಯೋಜನೆಯ ಮೂಲಕ ಬೈಂದೂರು ಕ್ಷೇತ್ರಕ್ಕೂ ನೀರು ಸಿಗುತ್ತಿದೆ. ಸೌಕೂರು ಏತನೀರಾವರಿ ಯೋಜನೆಗೆ ಬಜೆಟ್ನಲ್ಲಿ ಮಂಜೂರಾತಿ ಸಿಕ್ಕಿದೆ ಎಂದರು.