ಉಡುಪಿ, ಆ. 17 (DaijiworldNews/AA): ಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ (72) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬ್ರಹ್ಮಾವರ ತಾಲೂಕಿನ ಹಾರ್ಯಾಡಿಯಲ್ಲಿ 1953 ರಲ್ಲಿ ಜನಿಸಿದ ಮಂಜುನಾಥ್ ಭಟ್ ಅವರು, ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪದವಿ ಪಡೆದರು. ಆರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ ಅವರು, 1977 ರಲ್ಲಿ ಮಂಗಳೂರಿನ ನವಭಾರತ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಮುಂಗಾರು, ಕನ್ನಡ ಜನ ಅಂತರಂಗ, ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರು, ಉಪ-ಸಂಪಾದಕರಾಗಿ ಸೇವೆ ಸಲ್ಲಿಸಿದರು.
ನಿವೃತ್ತಿಯ ನಂತರ ಮಂಜುನಾಥ್ ಭಟ್ ಅವರು ಬೆಂಗಳೂರಿನಲ್ಲಿ ನೆಲೆಸಿದರು. ಉತ್ಥಾನ ಮಾಸಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕೀಯ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಹಲವಾರು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೊತೆಗೆ ಹಲವರ ಜೀವನಚರಿತ್ರೆಯ ಸಂಪಾದಕರಾಗಿ ಅವರು ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.