ಮಂಗಳೂರು, ಆ.17 (Daijiworld News/TA): ಶಿವಳ್ಳಿ ನಂಬಿಕಸ್ತ ಸಮುದಾಯ, ವಿಶಿಷ್ಟ ಆಹಾರ ಸಂಸ್ಕೃತಿಯ ಶಿವಳ್ಳಿ ಬ್ರಾಹ್ಮಣರ ಖಾದ್ಯಗಳು ತುಂಬಾ ರುಚಿಕರ ಎಂದು ಸಾಹಿತಿ, ಪತ್ರಕರ್ತ ರವೀಂದ್ರ ಜೋಶಿ ಹೇಳಿದರು. ಕದ್ರಿ ಶ್ರೀಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ನಡೆದ ಆಟಿ ಕೂಟ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾತ್ವಿಕ ಆಹಾರದಿಂದ ಜನರಲ್ಲಿ ಸಾತ್ವಿಕತೆ ಹೆಚ್ಚುತ್ತದೆ. ಶಿವಳ್ಳಿ ಹೆಸರಿನ ಹೋಟೆಲ್ಗಳಲ್ಲಿ ಆಹಾರದಲ್ಲಿ ಮೋಸ ಇರೋದಿಲ್ಲ, ಹೊಟ್ಟೆಗೆ ಸಮಸ್ಯೆ ಆಗುವುದಿಲ್ಲ. ವಿಶಿಷ್ಟ ರುಚಿ ಇರುತ್ತವೆ. ಆದರೆ ಅಂತಹ ಹೋಟೆಲ್ಗಳು ಈಗ ನಶಿಸುತ್ತಿವೆ ಎಂದರು. ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆದರೆ ಖಿನ್ನತೆ ಉಂಟಾಗುತ್ತದೆ. ಮಾನವ ಸಂಘಜೀವಿ ಇದೇ ರೀತಿಯ ಸಮುದಾಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಾನಸಿ, ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕದ್ರಿ ದೇವಸ್ಥಾನ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರು ಪ್ರವಚನ ನೀಡಿ, ಆಟಿ ತಿಂಗಳಿನಲ್ಲಿ ಮಹಿಳೆಯರು ಹೊಸ್ತಿಲು ಬರೆಯುವ ಕ್ರಮದಿಂದ ಪ್ರಾರಂಭಿಸಿ ತುಳುನಾಡಿನಲ್ಲಿ ಆಟಿ ತಿಂಗಳನ್ನು ವಿಶೇಷ ಕ್ರಮದಿಂದ ಆಚರಿಸುತ್ತಾರೆ.
ವಿವಿಧ ಆಚರಣೆಗಳಿವೆ, ಇದಕ್ಕೆ ವೈಜ್ಞಾನಿಕ/ಶಾಸ್ತ್ರದ ಹಿನ್ನೆಲೆ ಇದೆ ಎಂದರು. ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕಿನ ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಆಡಳಿತ ಮಂಡಳಿಯ ಸದಸ್ಯ ನೋಡು ಶ್ರೀನಿವಾಸ ಆಚಾರ್, ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಗಿರಿಪ್ರಕಾಶ್ ತಂತ್ರಿ, ಶಿವಳ್ಳಿ ತಾಲೂಕು ಮಹಿಳಾಘಟಕದ ಅಧ್ಯಕ್ಷೆ ರಮಾಮಣಿ, ವಲಯ ಅಧ್ಯಕ್ಷೆ ಗೀತ ಬೆಳ್ಳೆ, ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಕೋಶಾಧಿಕಾರಿ ರವಿಕಾಂತ ಭಟ್ ಇದ್ದರು. ಅನಂತ ಭಟ್ ಮತ್ತು ರಾಮಚಂದ್ರ ಭಟ್ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಆ ನಂತರ ಆಟಿ ತಿಂಗಳ ವಿಶೇಷ ಖಾದ್ಯ ವನ್ನು ತಯಾರಿಸಿದ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಖಾದ್ಯಗಳನ್ನು ಎಲ್ಲಾ ಸದಸ್ಯರಿಗೆ, ಅತಿಥಿಗಳಿಗೆ ಉಣಬಡಿಸಲಾಯಿತು.