ಉಡುಪಿ, ಜೂ 26 (Daijiworld News/SM): ಭಿಕ್ಷಾಟನೆಯಲ್ಲಿ ನಿರತ ಇಬ್ಬರು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಸಿಟಿ ಬಸ್ ಸ್ಟ್ಯಾಂಡ್ನಲ್ಲಿ ಭಿಕ್ಷಾಟನೆ ನಿರತ ಒಬ್ಬ ಬಾಲಕನನ್ನು ಹಾಗೂ ಆದಿಉಡುಪಿಯ ಸಂತೆ ಮಾರ್ಕೇಟ್ನಲ್ಲಿ ರಾಯಚೂರು ಮೂಲದ ನಾಲ್ವರು ಶಾಲೆಯಿಂದ ಹೊರಗುಳಿದ ಬಾಲಕರನ್ನು ರಕ್ಷಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ, ಪೋಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಮಕ್ಕಳ ಸಹಾಯವಾಣಿ, ನಾಗರೀಕ ಸೇವಾ ಸಮಿತಿ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಮಣಿಪಾಲ ಬಸ್ಸ್ಸ್ಟ್ಯಾಂಡ್, ಉಡುಪಿಯ ಸಿಟಿ ಬಸ್ಸ್ಸ್ಟಾಂಡ್, ಸರ್ವೀಸ್ ಬಸ್ಸ್ಸ್ಟಾಂಡ್ ಮತ್ತು ರಾಜಾಂಗಣ ಆಸುಪಾಸು, ಆದಿ ಉಡುಪಿಯ ಸಂತೆ ಮಾರ್ಕೇಟ್ನಲ್ಲಿ, ಭಿಕ್ಷಾಟನೆ ಮಾಡದಂತೆ ಅರಿವು ಮೂಡಿಸಲಾಯಿತು.
ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷಕ ಆನಂದ್ ಮತ್ತು ಕರುಣಾಕರ್, ಉಡುಪಿ ಮಹಿಳಾ ಠಾಣೆಯ ಪೋಲಿಸ್ ಉಪನಿರೀಕ್ಷಕಿ ಕಲ್ಪನಾ, ಮಣಿಪಾಲ ಠಾಣೆಯ ಎ.ಎಸ್.ಐ ಶೈಲೇಶ್ ಹಾಗೂ ಉಡುಪಿ ಡಿಸಿಐಬಿ ಮತ್ತು ಮಹಿಳಾ ಪೋಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.