ಮಂಗಳೂರು, ಜೂ27(Daijiworld News/SS): ಕಂದಾಯ ಅದಾಲತ್ ಅಭಿಯಾನ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಮಾತುಗಳು ಅದಾಲತ್ ಸಮಯದಲ್ಲಿ ಕೇಳಿ ಬಂದಿದೆ. ಈ ಕಾರಣಕ್ಕೆ ಹೋಬಳಿ ಮಟ್ಟದಲ್ಲಿ ಗ್ರಾಮ ಲೆಕ್ಕಿಗರು ಪರಿಶೀಲನೆ ಮಾಡಲಿದ್ದಾರೆ. ಈಗಾಗಲೇ 22,502 ಪಿಂಚಣಿದಾರರನ್ನು ಗುರುತಿಸಲಾಗಿದೆ. ಕಂದಾಯ ಅದಾಲತ್ ಅಭಿಯಾನ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಆಗಸ್ಟ್ ಅಂತ್ಯದೊಳಗೆ ಹೋಬಳಿ ಮಟ್ಟದಲ್ಲಿ ಕಂದಾಯ, ಪಿಂಚಣಿ ಅದಾಲತ್ ಆಂದೋಲನ ನಡೆಯಲಿದೆ ಎಂದು ಹೇಳಿದರು.
ದ.ಕ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ನಡೆಸಲಾಗಿದ್ದು, ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಅವುಗಳಿಗೆ ಪರಿಹಾರ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿಯವರು ಜೈಲುವಾಸ ಮಾಡಿ ಬಂದವರು ಅವರಿಗೆ ಗ್ರಾಮ ವಾಸ್ತವ್ಯದ ಕಲ್ಪನೆ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡುವುದರಿಂದ ಖರ್ಚು ಮಾತ್ರ ಲಾಭ ಏನೂ ಇಲ್ಲ ಎಂದು ಒಪ್ಪಿಕೊಂಡಂತಾಗಿದೆ ಎಂಬ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಐವನ್, ಕೋಟ ಅವರು ಸ್ಥಳೀಯ ಮಟ್ಟದಿಂದ ಬೆಳೆದು ಬಂದ ನಾಯಕರು, ಅವರು ಮಾತನಾಡುವ ಮೊದಲು ಅಲೋಚನೆ ಮಾಡಬೇಕು ಎಂದು ಹೇಳಿದರು.