ಮಂಗಳೂರು, ಆ. 20 (DaijiworldNews/AA): ಕೇಟರಿಂಗ್ ಉದ್ಯಮ ನಡೆಸುವವರು ತಮ್ಮ ಸಂಸ್ಥೆಗಳಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೊದಲು ಅವರ ಪೂರ್ವಾಪರಗಳನ್ನು ಸಮಗ್ರವಾಗಿ ಪರಿಶೀಲಿಸಿಕೊಳ್ಳಬೇಕು. ಹೊಸದಾಗಿ ಉದ್ಯೋಗ ಬಯಸಿ ಬರುವ ಯುವಕರು ತಮ್ಮ ಕುರಿತಾದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ಸಲ್ಲಿಸಿದ ಬಳಿಕವೇ ನೇಮಿಸಿಕೊಳ್ಳಬೇಕು ಎಂದು ಕದ್ರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅನಂತಪದ್ಮನಾಭ ಅವರು ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಸಂಜೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಹಾಗೂ ಕೇಟರಿಂಗ್ ಉದ್ಯಮದ ನಡುವೆ ಉತ್ತಮ ಬಾಂಧವ್ಯವಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಹೊತ್ತಲ್ಲದ ಹೊತ್ತಲ್ಲಿ ನಿದ್ರೆ, ಊಟ ಬಿಟ್ಟು ದುಡಿಯುವ ಸಂದರ್ಭಗಳು ಪ್ರತಿನಿತ್ಯ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ದಿಢೀರಾಗಿ ದೊಡ್ಡ ಸಂಖ್ಯೆಯಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ಆಹಾರ ತಯಾರಿಸಿ ಪೂರೈಸುವವರು ಕೇಟರಿಂಗ್ ಉದ್ಯಮದವರು. ಹೀಗಾಗಿ ಕೇಟರಿಂಗ್ ಉದ್ಯಮದಲ್ಲಿ ದುಡಿಯುವವವರ ಬಗ್ಗೆ ಪೊಲೀಸ್ ಇಲಾಖೆಗೆ ವಿಶೇಷ ಕಾಳಜಿಯಿದೆ ಎಂದು ಅವರು ನುಡಿದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಟರಿಂಗ್ ಉದ್ಯಮದಲ್ಲಿ ಕೆಲಸ ಹುಡುಕಿಕೊಂಡು ದೂರದ ಊರುಗಳಿಂದ- ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಿಂದ ಬರುವ ಅಪರಿಚಿತರ ಸಂಖ್ಯೆ ಹೆಚ್ಚುತ್ತಿದೆ. ಅಂಥವರನ್ನು ಇಲ್ಲಿನವರು ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ಸಮಗ್ರ ಮಾಹಿತಿ ತಿಳಿದಿರಬೇಕು. ಪೊಲೀಸ್ ಇಲಾಖೆಯ ಮೂಲಕ ಅವರ ಅಪರಾಧ ಹಿನ್ನೆಲೆಯನ್ನು ವಿಚಾರಿಸಿಕೊಂಡಿರಬೇಕು. ದೇಶದಲ್ಲಿ ಒಟ್ಟಾರೆ ಕಾನೂನು ಸುವ್ಯವಸ್ಥೆಯ ಪಾಲನೆಗೆ ಈ ಬಗೆಯ ಮುನ್ನೆಚ್ಚರಿಕೆ ತೀರಾ ಅಗತ್ಯ ಎಂದು ತಿಳಿಸಿದರು.
ನರದ ಪಂಪ್ವೆಲ್ ನಲ್ಲಿರುವ ದ.ಕ. ಜಿಲ್ಲಾ ಕೇಟರಿಂಗ್ ಮಾಲಕರ ಸಂಘದ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
2019ರಲ್ಲಿ ರಚನೆಯಾದ ಜಿಲ್ಲಾ ಕೇಟರಿಂಗ್ ಮಾಲಕರ ಸಂಘ ಇದೀಗ 6 ವರ್ಷಗಳನ್ನು ಪೂರೈಸಿದ್ದು, ಉದ್ಯಮದಲ್ಲಿ ದುಡಿಯುವವರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಅಲ್ಲದೆ ಅನಧಿಕೃತವಾಗಿ ನಡೆಯುವ ಕೇಟರಿಂಗ್ ವ್ಯವಹಾರವನ್ನು ಅಧಿಕೃತವಾಗಿ ಲೈಸೆನ್ಸ್ ಪಡೆದು ನಡೆಸುವ ವ್ಯವಸ್ಥೆಗೆ ಒಳಪಡಿಸಲು ಶ್ರಮಿಸುತ್ತಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ೨೫೦ಕ್ಕೂ ಹೆಚ್ಚು ಕೇಟರಿಂಗ್ ಉದ್ಯಮ ಸಂಸ್ಥೆಗಳು ಈ ಸಂಘದ ಸದಸ್ಯರಾಗಿವೆ. ಇನ್ನೂ ಹಲವು ಸಂಸ್ಥೆಗಳು ಸಂಘಟನೆಯ ಹೊರಗಿದ್ದು, ಅವುಗಳನ್ನು ಸಂಘಟನೆಯೊಳಕ್ಕೆ ತರುವ ಪ್ರಯತ್ನ ನಡೆದಿದೆ.
ಸಂಘಟನೆಯ ನೂತನ ಅಧ್ಯಕ್ಷರಾಗಿ ಶ್ರೀದೇವಿ ಕೇಟರರ್ಸ್ ಕೊಂಚಾಡಿಯ ಮಾಲಕ ಹಾಗೂ ಮಾಜಿ ಕಾರ್ಪೊರೇಟರ್ ರಾಜೇಶ್ ಕೆ ಹಾಗೂ ಕಾರ್ಯದರ್ಶಿಯಾಗಿ ಕರುಣಾಕರ ಪಡಿಯಾರ್ ಮತ್ತು ಕೋಶಾಧಿಕಾರಿಯಾಗಿ ಜೋಸಿ ವಾಲ್ಟರ್ ಸಿಕ್ವೇರಾ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಇಂದಿನ ಸಮಾರಂಭದಲ್ಲಿ ಪದಗ್ರಹಣ ಮಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಶೀದ್ ಅವರು ಅಧಿಕಾರ ಹಸ್ತಾಂತರ ಮಾಡಿದರು.
ಸಮಾರಂಭದಲ್ಲಿ ಇತರ ಮುಖ್ಯ ಅತಿಥಿಗಳಾಗಿ ಮನಪಾ ಮಾಜಿ ಮಹಾಪೌರ ಶಂಕರ ಭಟ್, ಅಡ್ಕ ಗ್ರೂಪ್ ಮಾಲಕ ಅಬ್ದುಲ್ ಕರೀಂ ಅಡ್ಕ, ಸಂಘದ ಗೌರವಾಧ್ಯಕ್ಷರಾದ ಎಂ.ಎ.ಎಸ್ ಇಕ್ಬಾಲ್, ಫೆಲಿಕ್ಸ್ ವೆವೆಲ್ ಲಸ್ರಾದೋ, ಬಂಟ್ವಾಳ ವಲಯದ ಅಧ್ಯಕ್ಷ ನಾರಾಯಣ ಪೂಜಾರಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಸದಸ್ಯರಿಗೆ ನೀಡಲಾದ ನೆರವಿನ ಮಾಹಿತಿ ನೀಡಿದರು. ನೂತನ ಅಧ್ಯಕ್ಷ ರಾಜೇಶ್ ಕೆ ಅವರು ಮಾತನಾಡಿ, ಎಲ್ಲರ ಮಾರ್ಗದರ್ಶನದೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದರು.
ಪ್ರತಿಭಾವಂತರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕೇಟರಿಂಗ್ ಉದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪಾಕತಜ್ಞರು ಹಾಗೂ ಇತರ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಮಹಾಪೌರ ಶಂಕರ ಭಟ್ ಮಾತನಾಡಿ, ಕೇಟರಿಂಗ್ ಸಂಸ್ಥೆಯ ಯಶಸ್ಸಿಗೆ ಮೂಲ ಕಾರಣರಾಗುವವರು ಪಾಕತಜ್ಞರು. ಅವರು ಮಾಡಿರುವ ಅಡುಗೆಯ ಗುಣಮಟ್ಟ ಚೆನ್ನಾಗಿದ್ದರೆ ಮಾತ್ರವೇ ಗ್ರಾಹಕರು ಸಂಸ್ಥೆಯ ಸೇವೆಯನ್ನು ಮೆಚ್ಚಿಕೊಳ್ಳುತ್ತಾರೆ. ಆ ಮೂಲಕ ಸಂಸ್ಥೆಯ ಬೆಳವಣಿಗೆ ಆಗುತ್ತದೆ. ಹಾಗಾಗಿ ಅಡುಗೆ ಮಾಡುವ ಪಾಕತಜ್ಞರನ್ನು ಸನ್ಮಾನಿಸಿ ಗೌರವಿಸಿರುವುದು ಉತ್ತಮ ನಡೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಟರಿಂಗ್ ಸಂಸ್ಥೆಯ ಮಾಲೀಕರು, ಸಂಘದ ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ ಅವರು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಳಿಕ ಭೋಜನ ಕೂಟದೊಂದಿಗೆ ಅತಿಥ್ಯ ನೀಡಲಾಯಿತು.