ಮಂಗಳೂರು,ಆ. 20 (DaijiworldNews/AK): ಕಡಬ ಪಟ್ಟಣ ಪಂಚಾಯತ್ನಲ್ಲಿ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ 8 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಮತದಾರರು ಗ್ಯಾಂರಂಟಿ ಯೋಜನೆಗಳಿಗೆ ಮತ್ತು ಕಾಂಗ್ರೆಸಿನ ಜನಪರ ಯೋಜನೆಗಳಿಗೆ ಬೆಂಬಲಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯು ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಒಂದು ದಿಕ್ಸೂಚಿಯಾಗಿದ್ದು, ಈ ಚುನಾವಣೆ ಮೂಲಕ ಕಾರ್ಯಕರ್ತರು ಉತ್ಸಾಹದಿಂದ ಮುಂದಿನ ಚುನಾವಣೆ ಎದುರಿಸಲು ಒಂದು ಶಕ್ತಿಯನ್ನು ಪಡೆದಿದ್ದಾರೆ ಎಂದು ಐವನ್ ಡಿʼಸೋಜಾರವರು ಮತದಾರರಿಗೆ ಮತ್ತು ಗೆದ್ದ ಅಭ್ಯರ್ಥಿಗಳಿಗೆ ಅಭಿನಂದಿಸಿದ್ದಾರೆ.
ಈ ಚುನಾವಣೆ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ಮುಟ್ಟಿಸಿರುವುದು ಮತ್ತು ಮುಂದೆ ಕೂಡ ಈ ಯೋಜನೆಗಳಿಂದ ಜನರಿಗೆ ಪ್ರಯೋಜನ ಪಡೆಯುವಂತಾಗಲು ಸಹಕಾರಿಯಾಗುತ್ತದೆ. ಗ್ಯಾರಂಟಿ ಯೋಜನೆಗಳು ಜನರನ್ನು ಇವತ್ತು ಸದೃಢರನ್ನಾಗಿ ಮಾಡಿದ್ದು ಅರ್ಥಿಕವಾಗಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರಿಗೆ ಗೌರವನ್ನು ತೋರಿಸಿದಂತಾಗಿದೆ. ಇವತ್ತು ಯಾರು ಬಡವರು ಹಸಿವಿನಿಂದ ಮಲಗಬಾರದು ಮತ್ತು ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದಂತಹ ಹಾಗೂ ಕೊಟ್ಟ ಮಾತಿನಂತೆ ನಡೆದ ಪರಿಣಾಮವಾಗಿ ಈ ಚುನಾವಣಾ ಫಲಿತಾಂಶ ಹೊರಹೊಮ್ಮಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ನಮ್ಮದೇ ಎಂದು ಮೊದಲಿನಿಂದಲೂ ಹೇಳುತ್ತಿದ್ದು ಈ ಒಂದು ಗೆಲುವಿಗೆ ಕಾರಣೀಭೂತರಾದ ಮತದಾರರಿಗೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರಿಗೆ ಪಕ್ಷದ ನಾಯಕರುಗಳಿಗೆ ಐವನ್ ಡಿʼಸೋಜಾರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.