ಬಂಟ್ವಾಳ, ಜೂ 27 (Daijiworld News/MSP): ವಿಟ್ಲ ಮತ್ತು ಪುತ್ತೂರು ನಗರ ಠಾಣೆಗಳ ವ್ಯಾಪ್ತಿಯಲ್ಲಿ ಜೂ.25 ರಂದು ನಡೆದ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಐದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ತಾಲೂಕಿನ ಕೆಲವೆಡೆಗಳಲ್ಲಿ ಕಿಡಿಗೇಡಿಗಳ ತಂಡ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಸ್ ಗಳಿಗೆ ಕಲ್ಲು ತೂರಾಟ ನಡೆಸಿ ಬಸ್ಸಿನ ಗಾಜು ಒಡೆದಿದ್ದು ಇಬ್ಬರು ಚಾಲಕರು ಮತ್ತು ಮೂರು ವಿದ್ಯಾರ್ಥಿನಿಯರಿಗೆ ರಕ್ತ ಗಾಯವಾಗಿತ್ತು. ಇದಕ್ಕೆ ಸಂಬಂಧಿಸಿ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದವು. ದುಷ್ಕರ್ಮಿಗಳ ಪತ್ತೆ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ವಿಟ್ಲ ಪೊಲಿಸ್ ಠಾಣೆಯ 04 ಹಾಗೂ ಪುತ್ತೂರು ಪೊಲೀಸ್ ಠಾಣೆಯ 01 ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಪುನೀತ್( 20 ) , ವೀರಕಂಭ ಗ್ರಾಮದ ಮಂಗಳ ಪದವು ನಿವಾಸಿ ಗುರುಪ್ರಸಾದ್ ( 20 ) , ಕೇಪು ಗ್ರಾಮದ ಮೈರ ನಿವಾಸಿ ಕಿರಣ್ರಾಜ್ (24) ಎಂಬವರನ್ನು ಬಂಧಿಸಿದ್ದಾರೆ.
ಇದರೊಂದಿಗೆ ಇದೇ ಪ್ರಕರಣದಲ್ಲಿ ಭಾಗಿಯಾದ ಹಲವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಜೂ.24 ರಂದು ಕೇರಳ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಎಂಬಲ್ಲಿ ದನ ಸಾಗಾಟವನ್ನು ತಡೆದು ಹಲ್ಲೆ ನಡೆಸಿ, ದರೋಡೆ ಮಾಡಿರುವ ವಿಚಾರದಲ್ಲಿ ಅಕ್ಷಯ್ ರಜಪೂತ್ ಮತ್ತು ಆತನ ಸಂಗಡಿಗರ ಮೇಲೆ ದರೋಡೆ ಪ್ರಕರಣ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇದರಿಂದ ಆಕ್ರೋಶಗೊಂಡ ಈತನ ಗುಂಪು ವಿಟ್ಲ ಬಂದ್ ನಡೆಸುವ ನೆಪದಲ್ಲಿ ಶಾಂತಿ ಭಂಗ ಮಾಡಲು ಸಂಚು ಮಾಡಿದ್ದು ಪರಿಣಾಮವಾಗಿ ಈ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.