ಕಾಪು, ಆ. 23 (DaijiworldNews/AA): ಜಾಗದ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ 45 ಲಕ್ಷ ರೂ. ಸಾಲ ಸೇರಿದಂತೆ ಒಟ್ಟು 1 ಕೋಟಿ 2.75 ಲಕ್ಷ ರೂ. ವಂಚಿಸಿದ ಆರೋಪಿ ದಂಪತಿಯನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಲ್ಲಾರು ಕೊಂಬಗುಡ್ಡೆ ನಿವಾಸಿ ರಿಯಾನತ್ ಬಾನು (25) ಹಾಗೂ ಆಕೆಯ ಗಂಡ ಉಚ್ಚಿಲ ಬಡಾ ಗ್ರಾಮ ಭಾಸ್ಕರ್ ನಗರ ನಿವಾಸಿ ನೂಮನ್ ಇಸ್ಮಾಯಿಲ್ (33) ಬಂಧಿತ ಆರೋಪಿಗಳು.
2024ರ ಫೆ. 21ರಿಂದ ಮಾ. 27ರ ನಡುವೆ ಆರೋಪಿಗಳಾದ ರಿಯಾನತ್ ಬಾನು ಮತ್ತು ನೂಮನ್ ಇಸ್ಮಾಯಿಲ್ ಅವರು ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ವಂಚಿಸುವ ಉದ್ದೇಶದಿಂದಲೇ ದಿನೇಶ್ ಮತ್ತು ರಾಜೇಶ್ ಎಂಬವರನ್ನು ಜಾಮೀನುದಾರರನ್ನಾಗಿಸಿಕೊಂಡು ಜಾಗ ಅಡವಿರಿಸಿ, 45 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಪಾವತಿಸಿದ್ದು ಅನಂತರದ ಕಂತನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು.
ಈ ಸಂದರ್ಭ ಸಂಘದವರಿಗೆ ಆರೋಪಿಗಳ ಮೇಲೆ ಅನುಮಾನ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ಶಕುಂತಳಾ ಆರ್. ಅವರದ್ದೆನ್ನಲಾದ ಜಾಗದ ಕ್ರಯಚೀಟಿಯ ದಸ್ತಾವೇಜು, ಒಪ್ಪಂದಕಾರರು, ಉಪ ನೋಂದಣಾಧಿಕಾರಿಯ ಸಹಿ, ಅವರ ಆಫೀಸಿನ ಮೊಹರು, ಋಣ ಭಾರ ಪತ್ರ, ಅದರಲ್ಲಿರುವ ಕಂದಾಯ ಅಧಿಕಾರಿಗಳ ಸಹಿ, ಮೊಹರು ಎಲ್ಲವನ್ನೂ ಪೋರ್ಜರಿ ಮಾಡಿ ಬಳಸಿಕೊಂಡು ಸುಳ್ಳು ದಾಖಲೆಗಳನ್ನು ತಯಾರಿಸಿ ಸಾಲ ಪಡೆಯಲು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಸಂಘದ ಶಾಖಾ ಪ್ರಧಾನ ವ್ಯವಸ್ಥಾಪಕ ಮೊದಿನ್ ಡಿ ಖಾನ್ ಅವರು ಆರೋಪಿಗಳಾದ ರಿಯಾನತ್ ಬಾನು ಮತ್ತು ನೂಮನ್ ಇಸ್ಮಾಯಿಲ್ ಸುಳ್ಳು ಮತ್ತು ಪೋರ್ಜರಿ ದಾಖಲೆ ನೀಡಿ 45 ಲಕ್ಷ ರೂ. ಪಡೆದು ಸಂಘಕ್ಕೆ ಮೋಸ, ಮತ್ತು ವಂಚಿದ್ದಾರೆ ಎಂದು ಕಳೆದ ಜ. 3ರಂದು ಕಾಪು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಭಾರೀ ಹರಸಾಹಸ ಪಡಬೇಕಾಯಿತು. ಆರೋಪಿ ದಂಪತಿ ಪತ್ತೆಗಾಗಿ ಬೆಂಗಳೂರು, ಜಮಖಂಡಿ, ಕೇರಳ ಸಹಿತ ವಿವಿಧೆಡೆ ತನಿಖೆ ನಡೆಸಿದ್ದರು. ಕಾರ್ಯಾಚರಣೆ ವೇಳೆ ಆರೋಪಿ ದಂಪತಿ ಕೇರಳದ ಮಲಪ್ಪುರಂ ಜಿಲ್ಲೆಯ ಕೋಟಕಲ್ನಲ್ಲಿ ಅವಿತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಕ್ರೈಂ ವಿಭಾಗದ ಸಿಬ್ಬಂದಿ ವರ್ಗದ ರಫೀಕ್, ರಾಘು, ಮೋಹನ್ ಮತ್ತೆ ಮಲಪ್ಪುರಂಗೆ ತೆರಳಿ ಅಲ್ಲಿ ವೇಷ ಮರೆಮಾಚಿ ಸುಮಾರು ಒಂದು ತಿಂಗಳು ಆರೋಪಿಗಳ ಚಲನವಲನಗಳ ತೀವ್ರ ಬಗ್ಗೆ ನಿಗಾ ಇರಿಸಿದ್ದರು. ಒಂದು ತಿಂಗಳ ಸತತ ಪರಿಶ್ರಮದ ಬಳಿಕ ಆ.12ರಂದು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಮತ್ತಷ್ಟು ವಿಚಾರಣೆಗೊಳಪಡಿಸಿದ ಸಂದರ್ಭ ಅವರ ವಂಚನಾ ಜಾಲ ಬೆಳಕಿಗೆ ಬಂದಿದೆ. ಕಸ್ಟಡಿ ವಿಚಾರಣೆಯ ಬಳಿಕ ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕಟಪಾಡಿ ಸಿಎ ಬ್ಯಾಂಕ್ನಲ್ಲಿ ನಕಲಿ ದಾಖಲೆ ಅಡವಿಟ್ಟು 45 ಲಕ್ಷ ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ. ಅದರೊಂದಿಗೆ ಕಾಪು ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕಿಯಾ ಕಾರಿಗೆ 18 ಲಕ್ಷ ರೂ., ಬಳಿಕ ಅದನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಅರಸಿಕೆರೆ ಕೆನರಾ ಬ್ಯಾಂಕ್ನಲ್ಲಿ 15 ಲಕ್ಷ ರೂ., ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಲೀಸ್ಗೆ ನೀಡುವುದಾಗಿ ತಿಳಿಸಿ 3.75 ಲಕ್ಷ ರೂ., ನೂತನ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯಲ್ಲಿ ಕಾರು ಅಡಮಾನವಿರಿಸಿ 8 ಲಕ್ಷ ರೂ. ಹಾಗೂ ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಜೀಪ್ ಕಂಪಾಸ್ ಕಾರಿಗೆ 13 ಲಕ್ಷ ರೂ. ಸಾಲ ಪಡೆದು, ಅದನ್ನು ನಕಲಿ ದಾಖಲೆ ಸೃಷ್ಠಿಸಿ ಬೆಂಗಳೂರಿಗೆ ಮಾರಾಟ ಮಾಡಿರುವ ಪ್ರಕರಣ ಸಹಿತ 1 ಕೋಟಿ 2.75 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಎಸ್ಪಿ ಹರಿರಾಮ್ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ| ಹರ್ಷಂ ಪ್ರಿಯವದಾ, ಕಾಪು ಸಿಪಿಐ ಜಯಶ್ರೀ ಮಾಣೆ ನೇತೃತ್ವದಲ್ಲಿ ಕಾಪು ಎಸ್ಐ ತೇಜಸ್ವಿ ಟಿ. ಐ. ನೇತೃತ್ವದಲ್ಲಿ ಕ್ರೈಂ ವಿಭಾಗದ ಸಿಬ್ಬಂದಿ ವರ್ಗದ ರಫೀಕ್, ರಾಘು, ಮೋಹನ್ ಮತ್ತಿತರರು ಭಾಗವಹಿಸಿದ್ದರು.