ಬಂಟ್ವಾಳ, ಆ. 23 (DaijiworldNews/AA): ಮಳೆಯ ಅಬ್ಬರ ಕಡಿಮೆಯಾಗುತ್ತಲೇ ಎರಡು ಆನೆಗಳು ನೇತ್ರಾವತಿ ನದಿಗೆ ಇಳಿದು ಜಲಕ್ರೀಡೆಯಾಡುತ್ತಿದ್ದ ದೃಶ್ಯ ತಾಲೂಕಿನ ಪೆರ್ನೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ವೇಳೆಯಲ್ಲಿ ಪೆರ್ನೆಯ ಅನೇಕ ಕೃಷಿಕರ ತೋಟದಲ್ಲಿ ಸುತ್ತಾಡಿದ್ದು, ಶನಿವಾರ ಬೆಳಿಗ್ಗೆಯಿಂದ ಸರಳಿಕಟ್ಟೆ ನೇತ್ರಾವತಿ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದ ದೃಶ್ಯ ಕಂಡುಬಂದಿದೆ.

ಆನೆಗಳು ನಾಡಿಗೆ ಬಂದಿರುವುದರ ಬಗ್ಗೆ ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 5 ಗಂಟೆಯವರೆಗೆ ಆನೆಯ ಚಲನವಲನಗಳನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಆ ಬಳಿಕ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ನೇತ್ರಾವತಿ ನದಿಯ ಎರಡೂ ಬದಿಗಳಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳನ್ನು ಓಡಿಸಲಾಯಿತು. ಇದೇ ವೇಳೆ ಎರಡು ಆನೆಗಳು ಸರಳಿಕಟ್ಟೆಯಿಂದ ಸೂರ್ಯ ಕಡೆಯ ಕಾಡಿಗೆ ತೆರಳಿತು ರಂದು ಸ್ಥಳೀಯರು ತಿಳಿಸಿದ್ದಾರೆ. ಸಂಜೆ ಕತ್ತಲು ಆವರಿಸಿದ್ದ ಹಿನ್ನೆಲೆಯಲ್ಲಿ ಆನೆ ಹೋದ ದಾರಿಯ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಎಸಿಎಫ್ ಸುಬ್ಬಯ್ಯ, ಆರ್ ಎಫ್ ಕಿರಣ್, ರಾಘವೇಂದ್ರ, ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಸುನಿಲ್ ಡಿಆರ್ ಎಫ್ ರವಿರಾಜ್ ಸಹಿತ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು, ಗ್ರಾಮಪಂಚಾಯತ್ ಸದಸ್ಯರೂ ಸಾಥ್ ನೀಡಿದರು. ಸಂಜೆಯ ವೇಳೆಗೆ ಭಾರೀ ಜನ ಜಮಾಯಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.