ಉಡುಪಿ, ಆ. 24 (DaijiworldNews/AA): ಆನ್ಲೈನ್ನಲ್ಲಿ ವೀಡಿಯೋ ಕರೆ ಮಾಡಿ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಸೊತ್ತುಗಳು, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ರಾಜಸ್ಥಾನದ ಮೂಲದ ಜೈದ್ ಮೊಹಮ್ಮದ್ ಅಲಿಯಾಸ್ ಜೈದ್ ಖಾನ್ (19) ಮತ್ತು ಒಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳಿಂದ 5 ಮೊಬೈಲ್ ಫೋನ್ ಮತ್ತು 2 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ದೂರುದಾರರೊಬ್ಬರಿಗೆ ಫೇಸ್ ಬುಕ್ನಲ್ಲಿ ಯುವತಿಯ ಪರಿಚಯವಾಗಿ ದೂರುದಾರರಿಗೆ ವೀಡಿಯೋ ಕರೆ ಮಾಡಿದ್ದು, ವೀಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಅವರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವೀಡಿಯೋವನ್ನು ದೂರುದಾರರಿಗೆ ವಾಟ್ಸಾಪ್ಗೆ ಕಳುಹಿಸಿದ್ದರು. ಅಪರಿಚಿತ ವ್ಯಕ್ತಿಗೆ ಹಣ ನೀಡದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿ ಹಂತ-ಹಂತವಾಗಿ ಒಟ್ಟು 4,44,999 ರೂ. ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪಿ.ಎಸ್.ಐ. ಹರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿತ್ತು. ಆರೋಪಿಯನ್ನು ಗೋವಾದ ಮಡಗಾಂವ್ ರೈಲು ನಿಲ್ದಾಣದ ಬಳಿ ಬಂಧಿಸಲಾಗಿದೆ.