ಬಂಟ್ವಾಳ, ಆ. 24 (DaijiworldNews/AA): ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ನಗರ ಪೊಲೀಸರು ದಾಳಿ ನಡೆಸಿ ಸುಮಾರು 80 ಸಾವಿರ ರೂ. ಮೌಲ್ಯದ 25 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಕಲ್ಲಡ್ಕ ಸಮೀಪದ ಪಟ್ಟೆಕೋಡಿಯಲ್ಲಿ ಶನಿವಾರ ನಡೆದಿದೆ.

ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿಗಳಾದ ಕಲ್ಲಡ್ಕ ನಿವಾಸಿಗಳಾದ ಉಗ್ರಾಣ ವ್ಯವಸ್ಥಾಪಕ ಉಮ್ಮರಬ್ಬ ಅಲಿಯಾಸ್ ಪುಟ್ಟುಮೋನು (47) ಮತ್ತು ಕಾರ್ಮಿಕ ರಫೀಕ್ (42) ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಉಮ್ಮರಬ್ಬ ಎಂಬಾತನು ತನ್ನ ಗೋದಾಮಿನಲ್ಲಿ ಪಡಿತರ ವಿತರಣೆಯ 21.04 ಕ್ವಿಂಟಾಲ್ ಬೆಳ್ತಿಗೆ ಹಾಗೂ 4.67 ಕ್ವಿಂಟಾಲ್ ಕುಚಲಕ್ಕಿಯನ್ನು ದಾಸ್ತಾನಿರಿಸಿದ್ದನು. ದಾಳಿಯ ವೇಳೆ ತೂಕ ಮಾಪನ ಯಂತ್ರ, ಗೋಣಿ ಚೀಲಗಳು, ಅಕ್ಕಿ ಸಾಗಾಟದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಡಿತರ ಅಕ್ಕಿ ಆತನಿಗೆ ಹೇಗೆ ಲಭಿಸಿದೆ ಎಂಬ ಕುರಿತು ತನಿಖೆ ನಡೆಯಬೇಕಿದ್ದು, ಪಡಿತರ ಟಕ್ಕಿ ಪಡೆದವರಿಂದ ಖರೀದಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.