ಮಂಗಳೂರು, ಆ. 25 (DaijiworldNews/AA): ಸುರತ್ಕಲ್ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ಬಳಿ ಸಮುದ್ರಕ್ಕೆ ಇಳಿದಿದ್ದ ನಾಲ್ಕು ಯುವಕರ ಪೈಕಿ ಓರ್ವ ಮೃತಪಟ್ಟು ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಮೃತರನ್ನು ಪಡುಪಣಂಬೂರು ಕಜಕತೋಟ ನಿವಾಸಿ, ದಿ.ಅನ್ವರ್ ಅವರ ಪುತ್ರ ಮುಹಮ್ಮದ್ ಸಮೀರ್ (23) ಎಂದು ಗುರುತಿಸಲಾಗಿದೆ.
ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಅವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಮತ್ತು ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್ ಅವರ ಪುತ್ರ ಫಾಝಿಲ್ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಒಂದೇ ಕುಟುಂಬದ ಆರು ಮಂದಿ ಸಹೋದರರ ಮಕ್ಕಳು ಭಾನುವಾರ ಸಂಜೆ ಸಸಿಹಿತ್ಲು ಮೂಂಡಾ ಬೀಚ್ಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಅವರು ನೀರಿನಲ್ಲಿ ಆಟವಾಡುತ್ತಿದ್ದಾಗ ಸಮೀರ್, ಐಮಾನ್ ಮತ್ತು ಫಾಝಿಲ್ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ದಡದಲ್ಲಿದ್ದ ಇತರರು ಬೊಬ್ಬೆ ಹಾಕಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ಮೀನುಗಾರ ನಿವಾಸಿಗಳು ಮೂವರು ಯುವಕರನ್ನು ರಕ್ಷಿಸಿ ಮುಕ್ಕದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಮೀರ್ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.