ಕುಂದಾಪುರ, ಆ. 25 (DaijiworldNews/AA): ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲ್ಯಾಡಿ ಕಿರು ಸೇತುವೆ ಸಮೀಪದಲ್ಲಿ ಅಳವಡಿಸಲಾಗಿದ್ದ ಬಲೆಗೆ ಸಿಕ್ಕಿಬಿದ್ದಿದ್ದ 'ಕಿಂಗ್ಫಿಶರ್' ಜಾತಿಗೆ ಸೇರಿದ ಪಕ್ಷಿಯನ್ನು ಸೋಮವಾರ ಬೆಳಿಗ್ಗೆ ರಕ್ಷಿಸಲಾಯಿತು.

ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿದ್ದ ಪಕ್ಷಿಯನ್ನು ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಬೈಕ್ ಸವಾರ ಅನಿಲ್ ಕೋಡಿ ಅವರು ಗಮನಿಸಿದ್ದು, ತಕ್ಷಣ ಪಕ್ಷಿಯ ಸಹಾಯಕ್ಕೆ ಧಾವಿಸಿದರು.
ಈ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸದಾರಾಮ ಶೆಟ್ಟಿ, ಸ್ಥಳೀಯರು ಬಲೆಗೆ ಸಿಲುಕಿರುವ ಪಕ್ಷಿಯನ್ನು ರಕ್ಷಿಸಲು ಮುಂದಾದರು. ಕತ್ತರಿ ಬಳಸಿ ಬಲೆಯನ್ನು ಕತ್ತರಿಸಿ ಪಕ್ಷಿಯನ್ನು ಬಲೆಯಿಂದ ಬಿಡಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ.