ಬಂಟ್ವಾಳ, ಆ. 25 (DaijiworldNews/AA): ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗ-ತೆಂಕಕಜೇಕಾರು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಅಭ್ಯಾಸ ವರ್ಗವು 24ನೇ ಆದಿತ್ಯವಾರ ನಡೆಯಿತು.







ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿವಪ್ರಸಾದ್ ಶೆಟ್ಟಿ "ಸುಶಿಕ್ಷಿತ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಮೂಲಕ ಪಕ್ಷ ಸಂಘಟನೆಯನ್ನು ಬಲಿಷ್ಠ ಗೊಳಿಸುವ ಉದ್ದೇಶದಿಂದ ಈ ಅಭ್ಯಾಸ ವರ್ಗ ನಡೆಯುತ್ತಿರುವುದು ಸಂತೋಷದ ವಿಚಾರ" ಎಂದು ತಿಳಿಸಿದರು.
ಮೊದಲ ಅವಧಿಯಲ್ಲಿ "ನಮ್ಮ ವಿಚಾರಗಳು ಮತ್ತು ಪಂಚ ಪರಿವರ್ತನೆಗಳು" ಎಂಬ ವಿಷಯದ ಬಗ್ಗೆ ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧರ್ಶನ್ ಬಜ ಮಾಹಿತಿ ನೀಡಿದರು. ಬಿಜೆಪಿ ಮಾಜಿ ಅಧ್ಯಕ್ಷರು ದೇವದಾಸ್ ಶೆಟ್ಟಿ ಅವರು ಎರಡನೇ ಅವಧಿಯಲ್ಲಿ "ಬೂತ್ ಸಂಘಟನೆ ಮತ್ತು ಸ್ಥಳೀಯಾಡಳಿತದಲ್ಲಿ ನಮ್ಮ ಪಾತ್ರ" ಎಂಬ ವಿಷಯ ಮಂಡಿಸಿದರು. ಮೂರನೇ ಅವಧಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸತೀಶ್ ಕುಂಪಲ ಅವರು "ವಿಕಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರೀಯತೆ" ಎಂಬ ವಿಷಯ ಮಂಡಿಸಿದರು.
ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು, "ಬಿಜೆಪಿ ಇಂದು ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯಲ್ಲಿರುವುದರ ಹಿಂದೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿವೆ. ವಿಶ್ವ ಮಾನ್ಯ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯವರ ಕನಸು. ಆ ಕನಸು ನನಸಾಗ ಬೇಕಾದರೆ ವೈಚಾರಿಕವಾಗಿ ಪ್ರಬುದ್ಧರಾದ ಸಶಕ್ತ ಕಾರ್ಯಕರ್ತರ ತಂಡ ಶಕ್ತಿಕೇಂದ್ರ ಮಟ್ಟದಲ್ಲಿ ಬೇಕಾಗಿದೆ. ಹಾಗಾಗಿ ವ್ಯಕ್ತಿತ್ವ ನಿರ್ಮಾಣದ ಉದ್ದೇಶದಿಂದ ಈ ಅಭ್ಯಾಸ ವರ್ಗ ನಡೆಸಲಾಗಿದೆ" ಎಂದರು.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ ಉಪಾಧ್ಯಕ್ಷೆ ಮತಿ ಸುಗಂಧಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ್ ಬಂಗೇರ ಉಪಾಧ್ಯಕ್ಷ ಮೋಹನಂದ ಪಾಂಡವರಕಲ್ಲು ಸದಸ್ಯರಾದ ಸುರೇಶ್ ಬರ್ದೋಟ್ಟು, ಯಶವಂತ ಕೊಡಿಯೆಳು, ಪಕ್ಷದ ಹಿರಿಯ ಕಾರ್ಯಕರ್ತರು ಬೂತ್ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದ್ದರು.