ಮಂಗಳೂರು, ಜೂ27(Daijiworld News/SS): ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಸಮೀಪ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಗೃಹೋಪಯೋಗಿ, ಇಲೆಕ್ಟ್ರೋನಿಕ್ಸ್ ಇರುವ ಮಳಿಗೆ ‘ಕಿನ್ನಿಗೋಳಿ ಪಿಪಿಪಿಎಸ್ ಶಾಪಿಂಗ್ ಮಾಲ್, ರೆಸ್ಟೋರೆಂಟ್’ ಇತ್ತೀಚೆಗೆ ಲೋಕಾರ್ಪಣೆಗೊಂಡಿತು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾದರ್ ಮ್ಯಾಥ್ಯೂ ವಾಝ್, ಸಹಾಯಕ ಧರ್ಮಗುರು ಫಾ. ರೂಪೇಶ್ ತೌರೋ, ಯುಗಪುರುಷ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯತ್ನ ಅಧ್ಯಕ್ಷ ಫಿಲೋಮಿನಾ ಸಿಕ್ವೇರಾ ದೀಪ ಬೆಳಗಿಸುವ ಮೂಲಕ ನೂತನ ಮಾಲ್ ಲೋಕಾರ್ಪಣೆಗೊಳಿಸಿದರು.
ಫಾ. ಮ್ಯಾಥ್ಯೂ ವಾಝ್ ಮಾತನಾಡಿ, ಮಳಿಗೆಯ ನೂತನ ಪರಿಕಲ್ಪನೆಯನ್ನು ಶ್ಲಾಘಿಸಿದರು. ಪರಿಸರದ ಜನತೆಗೆ ಈ ಮಳಿಗೆಯಿಂದ ಉಪಯೋಗವಾಗಲಿ. ಸಂಸ್ಥೆ ಇನ್ನಷ್ಟು ಶ್ರೇಯೋಭಿವೃದ್ಧಿ ಆಗಲಿ ಶುಭ ಹಾರೈಸಿದರು. ಆಗಮಿಸಿದ್ದ ಗಣ್ಯರು ಮಳಿಗೆಗೆ ಶುಭ ಹಾರೈಸಿ, ಮಾಲಕ ಪಿಯೂಸ್ ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿನ್ನಿಗೋಳಿ ಪರಿಸರದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಈ ಮಳಿಗೆಯನ್ನು ತೆರೆಯಲಾಗಿದ್ದು, ಗೃಹೋಪಯೋಗಿ, ಮನೆಬಳಕೆ ಸೇರಿದಂತೆ ಎಲ್ಲಾ ಸೊತ್ತುಗಳೂ ಇಲ್ಲಿ ಲಭ್ಯ ಇದೆ. ಸಾರ್ವಜನಿಕರಿಗೆ ನಮ್ಮ ನೂತನ ಮಳಿಗೆಯಲ್ಲಿ ಏನಾದರೂ ಕೊರತೆ ಕಂಡು ಬಂದಲ್ಲಿ ಕೂಡಲೇ ನಮ್ಮ ಗಮನಕ್ಕೆ ತಂದಲ್ಲಿ ನಾವು ನಿಮ್ಮ ಬೇಡಿಕೆಯನ್ನು ಪೂರ್ಣಗೊಳಿಸಲು ಯತ್ನಿಸುವುದಾಗಿ ಪಿಪಿಪಿಎಸ್ ಮಾಲಕ ಪಿಯೂಸ್ ಫೆರ್ನಾಂಡಿಸ್ ಭರವಸೆ ನೀಡಿದರು.
ಮಳಿಗೆಯಲ್ಲಿ ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರಿಗೂ ಬೇಕಾದ ಎಲ್ಲಾ ಸವಲತ್ತುಗಳು ಲಭ್ಯವಿದ್ದು, ಅಡುಗೆಗೆ ಬೇಕಾದ ವಸ್ತುಗಳು, ಆಹಾರ ಪದಾರ್ಥಗಳು, ಬಟ್ಟೆಬರೆ, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಗಲಿದೆ. ೧೪,೦೦೦ ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಮಳಿಗೆಯನ್ನು ನಿರ್ಮಿಸಲಾಗಿದೆ ಎಂದು ಕಿನ್ನಿಗೋಳಿ ಪಿಪಿಪಿಎಸ್ ಮಾಲ್ ಮ್ಯಾನೇಜರ್ ಮರ್ವಿನ್ ಫೆರ್ನಾಂಡಿಸ್ ನುಡಿದರು.
ಅತ್ಯುತ್ತಮ ಗುಣಮಟ್ಟದ ಸೊತ್ತುಗಳ ಜೊತೆಗೆ ಮಿತದರದಲ್ಲಿ ಎಲ್ಲವೂ ಇಲ್ಲಿ ಲಭ್ಯವಿರಲಿದೆ. ಇಲೆಕ್ಟ್ರೋನಿಕ್ಸ್ ಸೊತ್ತುಗಳು, ಗೃಹೋಪಯೋಗಿ ಪರಿಕರಗಳು, ಬಟ್ಟೆಬರೆಗಳು, ರೆಸ್ಟೋರಾಂಟ್ ಹೀಗೆ ಎಲ್ಲವೂ ಒಂದೇ ಸೂರಿನಡಿಯಲ್ಲಿ ಇಲ್ಲಿ ಲಭ್ಯವಾಗಲಿದೆ.