ಮಂಗಳೂರು , ಡಿ 08 : ನಗರದ ಕಾರ್ ಸ್ಟ್ರೀಟ್ ಬಳಿ ಇರುವ ಟೆಕ್ಸ್ ಟೈಲ್ಸ್ ಮಳಿಗೆಯೊಂದರ ಬಳಿ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಶೂಟೌಟ್ ನಡೆದಿದ್ದು, ಮಳಿಗೆಯ ಕೆಲಸಗಾರ ಗಾಯಗೊಂಡಿದ್ದಾರೆ.
ಮಹಾಲಿಂಗ ನಾಯ್ಕ ಎಂಬ ಹೆಸರಿನ ಕಾರ್ಮಿಕ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹದ ಹಿಂಭಾಗಕ್ಕೆ ಗುಂಡು ತಗುಲಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾರ್ ಸ್ಟ್ರೀಟ್ ನಲ್ಲಿರುವ ಪ್ರಸಿದ್ದ್ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್ ಸಾರೀಸ್ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದ್ದು , ಅಂಗಡಿಯಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.
ಗ್ರಾಹಕನ ಸೋಗಿನಲ್ಲಿ ಬಂದ ದುಷ್ಕರ್ಮಿ ಟೀ ಶರ್ಟ್ ಕೇಳಿದ್ದಾನೆ. ಅಂಗಡಿಯವರು ಅಂಗಡಿ ಮುಚ್ಚುವ ಸಮಯವಾಗಿದ್ದರಿಂದ ತರಾತುರಿಯಲ್ಲಿದ್ದು ನಾಳೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಂಗಡಿ ಕೆಲಸಗಾರ ಮಹಾಲಿಂಗ ನಾಯ್ಕ ಬಾಗಿಲು ಮುಚ್ಚಲು ಸಿದ್ಧತೆ ಮಾಡುತ್ತಿದ್ದಾಗ ದುಷ್ಕರ್ಮಿ ಹಿಂದಿನಿಂದ ತನ್ನಲ್ಲಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಅಂಗಡಿಯಲ್ಲಿ ಅಂಗಡಿ ಮಾಲಕ ಸಂಜೀವ ಶೆಟ್ಟಿ ಸೇರಿದಂತೆ ಮೂರು ಮಂದಿ ಇದ್ದರು. ಘಟನೆ ಬಗ್ಗೆ ತಿಳಿಯುತ್ತಿದಂತೆ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಶೂಟೌಟ್ ಗೆ ಹಪ್ತಾ ವಸೂಲಿ ಮಾಫಿಯಾ ಕಾರಣ ಇರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.