ಸುಳ್ಯ, ಜೂ 27 (Daijiworld News/SM): ಸಾಂಕ್ರಾಮಿಕ ರೋಗಗಳು ಅತೀ ಹೆಚ್ಚಾಗಿ ಕಾಡುವ ಸುಳ್ಯದಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಪ್ರಮಾಣ ಇಳಿಕೆ ಕಂಡರೂ, ಈ ಬಾರಿ ಮಳೆಗಾಲದ ಆರಂಭದಲ್ಲೇ ಸಾಂಕ್ರಾಮಿಕ ಜ್ವರ, ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳು ಕಂಡು ಬಂದಿವೆ. ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.
ಇವುಗಳ ಪೈಕಿ ಹಲವಾರು ಮಂದಿ ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸುಳ್ಯ ಮತ್ತು ಹೊರ ತಾಲೂಕಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ಗ್ರಾಮಾಂತರ ಪ್ರದೇಶದಲ್ಲಿ ರೋಗ ಬಾಧೆ ಹೆಚ್ಚು ಕಾಣಿಸಿಕೊಂಡಿದೆ.
ಕಳೆದ ಸೋಮವಾರ ತಾಲೂಕು ಆಸ್ಪತ್ರೆಯಲ್ಲಿ ಒಳರೋಗಿಗಳು ದಾಖಲಾಗುವ ಬೆಡ್ ಭರ್ತಿಗೊಂಡು, ಹೆಚ್ಚಿನವರು ಹೊರಭಾಗದಲ್ಲೇ ಚಿಕಿತ್ಸೆ ಪಡೆದು ತೆರಳುವ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸ್ಥಿತಿ ಗುತ್ತಿಗಾರು, ಪಂಜದಲ್ಲಿಯೂ ತಲೆದೋರಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಿನಂಪ್ರತಿ 190ಕ್ಕೂ ಅಧಿಕ ಜ್ವರ ಪೀಡಿತರು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಂತೋಡು, ಬೆಳ್ಳಾರೆ, ಪಂಜ ಪರಿಸರದಲ್ಲಿಯೂ ಚಿಕಿತ್ಸೆಗೆ ಬರುವವ ರ ಸಂಖ್ಯೆ ಹೆಚ್ಚಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ, ಟೈಫಾಯಿಡ್, ಸಾಂಕ್ರಾಮಿಕ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿರುವುದು. ಶಂಕಿತ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿಕೊಂಡಿದೆ.