ಮಂಗಳೂರು, ಸೆ. 03 (DaijiworldNews/AA): ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಎಂಟು ಜನರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾರ್ತಿಕ್, ರಾಕೇಶ್ ಸಲ್ಡಾನಾ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್ ಮತ್ತು ಸುರೇಶ್ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
ಎರಡು ತಿಂಗಳ ಹಿಂದೆ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಾರ್ತಿಕ್ಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯೊಬ್ಬಳ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿದೆ. ಜೂನ್ನಲ್ಲಿ ಆತ ಆ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅಡ್ಯಾರ್ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಸ್ಥಳದಲ್ಲಿದ್ದ ಆತನ ಸ್ನೇಹಿತ ರಾಕೇಶ್ ಸಲ್ಡಾನಾ ಕೂಡ ಆಕೆಯಮೇಲೆ ಅತ್ಯಾಚಾರ ಎಸಗಿದ್ದಾನೆ. ಕಾರ್ತಿಕ್ ಈ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ನಂತರ ಈ ವಿಡಿಯೋವನ್ನು ತನ್ನ ಸ್ನೇಹಿತರ ನಡುವೆ ಹಂಚಿಕೊಂಡಿದ್ದು, ಬಳಿಕ ವೈರಲ್ ಆಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಸಂತ್ರಸ್ತೆಯು ಆಗಸ್ಟ್ ೧೬ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.