ಕುಂದಾಪುರ, ಜೂ28(Daijiworld News/SS): ಇಲ್ಲಿನ ನಾವುಂದ ಕಡಲ ತೀರದಲ್ಲಿ ಅಪರೂಪದ ಬೃಹತ್ ಗಾತ್ರದ ಕಡಲಾಮೆಯೊಂದು ಪತ್ತೆಯಾಗಿದೆ.
ಬೈಂದೂರು ವ್ಯಾಪ್ತಿಯಲ್ಲಿ ಬರುವ ನಾವುಂದ ಕಡಲ ತೀರದಲ್ಲಿ ಪತ್ತೆಯಾಗಿರುವ ಈ ಆಮೆ ಅಲಿವ್ ರಿಡ್ಲೇ ಜಾತಿಗೆ ಸೇರಿದ ಕಡಲಾಮೆಯಾಗಿದೆ. ಸುಮಾರು 20 ಕೆಜಿ ತೂಕದ ಈ ಕಡಲಾಮೆಯ ಬಲ ಪಾದಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಪಾದಗಳಿಗೆ ಬಲೆ ಸುತ್ತಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯ ಕಡಲಾಮೆ ಸಂರಕ್ಷಣೆ ಕಾರ್ಯಕರ್ತರು ಅರಣ್ಯ ಇಲಾಖೆ ಮತ್ತು ಕಡಲಾಮೆ ಸಂರಕ್ಷಣೆ ನಿರತ ಎಫ್ಎಸ್ಎಲ್ ಇಂಡಿಯಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಕಡಲಾಮೆಯ ಪಾದ ಮತ್ತು ದೇಹದ ಭಾಗಗಳಿಗೆ ಗಾಯಗಳಾಗಿರುವುದರಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಸಂಬಂಧಿತ ವೈದ್ಯರ ಮೂಲಕ ಚಿಕಿತ್ಸೆ ನೀಡಿ ನಂತರ ಕಡಲಿಗೆ ಬಿಡಲಿದ್ದೇವೆ ಎಂದು ಎಫ್ಎಸ್ಎಲ್ ಇಂಡಿಯಾ ಸಂಸ್ಥೆಯವರು ತಿಳಿಸಿದ್ದಾರೆ.