ಮಂಗಳೂರು,ಸೆ. 05 (DaijiworldNews/AK): ಕಲ್ಲನ್ನು ಶಿಲೆಯಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡುತ್ತಿರುವ ಶಿಕ್ಷಕರ ದಿನವಾದ ಇಂದು "ಶಿಕ್ಷಾಸಾಥಿ" ಎನ್ನುವಂತಹ ಒಂದು ಹೊಸ ಆರಂಭಕ್ಕೆ ಚಾಲನೆ ನೀಡಲಾಯಿತು.

ಮಂಗಳೂರಿನ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ ಅವರು "ಶಿಕ್ಷಾಸಾಥಿ" ಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷರೆಲ್ಲರೂ ಸೇರಿ ಶಿಕ್ಷಾಸಾಥಿ ಎಂಬ ಹೊಸ ಚಿಂತನೆಗೆ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಕೆಲಸದ ಬಿಡುವಿನ ವೇಳೆ, ಕುಟುಂಬಕ್ಕಾಗಿ ನೀಡುವ ಸಮಯವನ್ನು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಬೆಳವಣಿಗೆಗೆ ಮೀಸಲಿಟ್ಟು, ತಮ್ಮಲ್ಲಿರುವ ವಿದ್ಯೆಯನ್ನು ಧಾರೆಯೆರೆಯುವ ಕೆಲಸ ಶ್ಲಾಘನೀಯ ಎಂದರು.
ತಂದನಂತರ ಮಾತನಾಡಿದ ಶಿಕ್ಷಕಿ ಆಶಪ್ರಿಯ, ಮಕ್ಕಳಿಗೆ ಒಂದು ಸಣ್ಣ ಪೆನ್ಸಿಲ್ ನೀಡಿದರೂ ಅವರ ಖುಷಿಗೆ ಪಾರವೇ ಇರುವುದಿಲ್ಲ. ಅದನ್ನೆಲ್ಲ ಮನಗಂಡ ನಾವು ನಮ್ಮಿಂದಾಗುವ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂಥಹ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ. ಇದಕ್ಕೆ ಎಲ್ಲರ ಶುಭ ಹಾರೈಕೆ ಬೆಂಬಲ ಅಗತ್ಯ ಎಂದರು. ಜೊತೆಗೆ ಮಾತನಾಡಿದ ಶಿಕ್ಷಕಿ ಸುಜಾತ, ಶಿಕ್ಷಣ ಮತ್ತು ಪ್ರೀತಿಯ ಜೊತೆಗೆ ಮಕ್ಕಳ ಕಲಿಕೆಗೆ ನಮ್ಮಿಂದಾಗುವ ಬೆಂಬಲವನ್ನು ನೀಡುತ್ತಿದ್ದೇವೆ. ಕೇವಲ ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಆಸ್ಪದ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭ, ಶಿಕ್ಷಕಿಯಾರಾದ ಹವ್ಯ ಕುಮಾರಿ, ಲಕ್ಷ್ಮಿ ಹಾಗು ಸಾಮಾಜಿಕ ಕಾರ್ಯಕರ್ತೆ ಸೌಮ್ಯ ಉಪಸ್ಥಿತರಿದ್ದರು. ಈ ಚಿಂತನೆಗೆ ಬೆಂಬಲ ಸೂಚಿಸಲು ಇಚ್ಛಿಸುವವರು 9743706008 ಸಂಖ್ಯೆಯನ್ನು ಸಂಪರ್ಕಿಸಬಹುದು.