ಉಡುಪಿ, ಸೆ. 05 (DaijiworldNews/AK): ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಈದ್ ಮಿಲಾದ್(ಮಿಲಾದುನ್ನಬಿ)ಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಆಚರಿಸಲಾಯಿತು. ಶುಕ್ರವಾರ ಮುಂಜಾನೆ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಬೆಳಿಗ್ಗೆ ಮಸೀದಿ, ಮದ್ರಸಾಗಳಲ್ಲಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು.



ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಸೀದಿ, ಮದ್ರಸಾಗಳಲ್ಲಿ ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು.
ಕೆಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳೂ ನಡೆದವು.ಕೆಲವೆಡೆಗಳಲ್ಲಿ ಮದರಸಾ ವಿದ್ಯಾರ್ಥಿಗಳಿಂದ ಮೆರವಣಿಗೆ ,ಆಕರ್ಷಕ ದಪ್ ಗಮನ ಸೆಳೆಯಿತು.ಮಿಲಾದುನ್ನಬಿ ಇಂದು ಆಚರಿಸುತ್ತಿದ್ದರೂ ,ಕೆಲವು ಮಸೀದಿ ವ್ಯಾಪ್ತಿಗಳಲ್ಲಿ ಕಾರ್ಯಕ್ರಮ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಶನಿವಾರ ಮತ್ತು ಭಾನುವಾರಗಳಂದೂ ನಡೆಯಲಿದೆ. ಮಿಲಾದುನ್ನಬಿ ಪ್ರಯುಕ್ತ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಸಾಂತ್ವನ -ಹಣ್ಣು ಹಂಪಲು ವಿತರಣೆ, ವೀಲ್ ಚಯರ್ ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಈದ್ ಮೆರವಣಿಗೆಗೆ ಹಿಂದೂ ಬಾಂಧವರಿಂದ ಸಿಹಿ ತಿಂಡಿ ವಿತರಣೆ : ಸೌಹಾರ್ದ ಸಂದೇಶ
ಬೈಂದೂರು ತಾಲೂಕು ಶಿರೂರು ಭಾಗದ ಅಲ್ಪಸಂಖ್ಯಾತ ಬಾಂಧವರ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಹಿಂದೂ ಸಮಾಜ ಬಾಂಧವರು ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದತೆ ಮೆರೆದರು. ಸ್ಥಳೀಯ ಮುಖಂಡ ವೀರಭದ್ರ ಗಾಣಿಗ ಮತ್ತು ದಲಿತ ಸಮಾಜದ ಮುಖಂಡರ ನೇತೃತ್ವದಲ್ಲಿ ಸಿಹಿ ತಿಂಡಿ ಹಂಚುವುದರ ಮೂಲಕ ಶಾಂತಿ ಸೌಹಾರ್ದತೆ ಸಾರಲಾಯಿತು.