ಬೆಳ್ತಂಗಡಿ, ಸೆ. 06 (DaijiworldNews/AA): ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ, ಒಂಬತ್ತು ಜಾನುವಾರುಗಳ ತಲೆಯನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮೊಹಮ್ಮದ್ ರಫೀಕ್ ಅಲಿಯಾಸ್ ಅಪ್ಪಿ ಎಂಬಾತನ ಮನೆ ಮೇಲೆ ಈ ದಾಳಿ ನಡೆದಿದೆ. ಕಳವು ಮಾಡಿದ ಜಾನುವಾರುಗಳನ್ನು ಇಲ್ಲಿಗೆ ತಂದು ಅಕ್ರಮವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳಿಂದ ಸರ್ಚ್ ವಾರಂಟ್ ಪಡೆದು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರು ಮೂರು ಕತ್ತಿ, ಎರಡು ಮರದ ಹಿಡಿಕೆಯ ಚಾಕುಗಳು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಒಂದು ಮರದ ತುಂಡು, ಟಾರ್ಪಲ್, ಒಂದು ಜೀವಂತ ಹಸು ಮತ್ತು ಕರು, ಜಾನುವಾರು ತ್ಯಾಜ್ಯ ತುಂಬಿದ ಓಮ್ನಿ ವ್ಯಾನ್ ಮತ್ತು ಒಂಬತ್ತು ಕತ್ತರಿಸಿದ ಜಾನುವಾರುಗಳ ತಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಪಶುಸಂಗೋಪನಾ ಇಲಾಖೆಯ ಪಶುವೈದ್ಯರ ಸಮ್ಮುಖದಲ್ಲಿ ಈ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ದಾಳಿ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಮುಖ ಆರೋಪಿ ಮೊಹಮ್ಮದ್ ರಫೀಕ್ ಅಲಿಯಾಸ್ ಅಪ್ಪಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಗೋಹತ್ಯೆಯಲ್ಲಿ ತೊಡಗುವುದನ್ನು ಮುಂದುವರೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಾಪುತ್ ಮಠ್, ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್ ಮಾದರ ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ್, ಸತೀಶ್, ಜಗದೀಶ್, ಹಾಗೂ ಚಾಲಕ ಧರೇಶ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.