ಸುಳ್ಯ, ಸೆ. 06 (DaijiworldNews/AK):ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ಕಾಣಿಸಿಕೊಂಡು ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ವರದಿಯಾಗಿದೆ.

ಸ್ಥಳೀಯರ ತೋಟಗಳಿಗೆ ನುಗ್ಗಿದ ಕಾಡಾನೆಗಳು ,ಅಡಿಕೆ,ತೆಂಗು,ಬಾಳೆ ಇತರ ಕೃಷಿಗಳನ್ನು ನಾಶ ಮಾಡಿದ ಪರಿಣಾಮ ರೈತರಿಗೆ ಅಪಾರ ಬೆಳೆ ನಷ್ಟವಾದ ಘಟನೆ ಉಂಟಾಗಿದೆ.
ಬಳಿಕ ಸ್ಥಳೀಯರೆಲ್ಲ ಸೇರಿ ಆನೆಗಳನ್ನು ಕಾಡಿಗೆ ಅಟ್ಟಿದ್ದರು. ಪೂಮಲೆ ಕಾಡಿನಲ್ಲಿ ಕಾಡಾನೆಗಳು ಹಗಲು ಹೊತ್ತಿನಲ್ಲಿ ಬೀಡುಬಿಡುತ್ತಿದ್ದು, ಮತ್ತೆ ರಾತ್ರಿ ಸಮಯ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಬೆಳೆ ನಾಶದ ಜೊತೆಗೆ ಪ್ರಯಾಣಿಕರಿಗೆ ಸ್ಥಳೀಯ ಜನರ ಜೀವಕ್ಕೆ ಕಾಡಾನೆಗಳಿಂದ ಅಪಾಯ ಎದುರಾಗಿದೆ.
ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾಡಾನೆಗಳು ಹಾನಿ ಮಾಡಿರುವ ಬೆಳೆಗಳ ಪೋಟೋ ತೆಗೆದುಕೊಂಡು ಹೋಗಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ .ಕಾಡಾನೆಗಳನ್ನು ಓಡಿಸುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.